'ವಿದ್ಯಾರ್ಥಿಗಳೇ, ಸಮಸ್ಯೆ ನಿವಾರಣೆಗೆ ಸಿದ್ಧರಾಗಿ'
ಸುಬ್ರಹ್ಮಣ್ಯ: ವರ್ತಮಾನದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅನುಭವಿಸುತ್ತಿರುವ ಸಮಸ್ಯೆ ನಿವಾರಣೆ ಅಗತ್ಯ. ಇದಕ್ಕಾಗಿ ಯುವಶಕ್ತಿ ಸಿದ್ಧರಾಗಬೇಕು. ರಾಷ್ಟ್ರ ಭಕ್ತಿಯೊಂದಿಗೆ ವಿವೇಕದ ಜಾಗೃತಿ ಅನುರಣಿತವಾದಾಗ ಯುವ ಸಂಪತ್ತು ಶ್ರೇಷ್ಠತೆ ಮೆರೆಯಲು ಸಾಧ್ಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ವಿ. ವಸಂತ ಕುಮಾರ್ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಮಾಯಾ ರೆಸಿಡೆನ್ಸಿ ಸಭಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಎರಡು ದಿನದ ರಾಜ್ಯ ಕಾರ್ಯಕಾರಿಣಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಶೈಕ್ಷಣಿಕ ತೊಂದರೆ, ಯುವತಿಯರ ಮೇಲಿನ ದೌರ್ಜನ್ಯವನ್ನು ಒಕ್ಕೊರಲಿನಿಂದ ವಿದ್ಯಾರ್ಥಿ ಶಕ್ತಿ ಖಂಡಿಸಬೇಕು. ಯುವ ಶಕ್ತಿಯ ಉತ್ಥಾನಕ್ಕೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮನೋಭಾವನೆ ಬೆಳೆಯುವ ಅಗತ್ಯ ಇದೆ. ಯುವಶಕ್ತಿ ಜಾಗೃತಿ ಶಕ್ತಿಯಾಗಿ ಪರಿವರ್ತಿತವಾಗಿ ದೇಶದಲ್ಲಿ ಯುವ ಪ್ರಭೆ ಪ್ರಜ್ವಲಿತವಾಗಬೇಕು ಎಂದರು.
ರಾಜ್ಯ ಕಾರ್ಯದರ್ಶಿ ಕೆ.ರಮೇಶ್, ರಾಷ್ಟ್ರೀಯ ಕಾರ್ಯದರ್ಶಿ ವಿನಯ ಬಿದಿರೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಯಶೋಧ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸೋಳಿಕೆ ಮುಖ್ಯ ಅತಿಥಿಗಳಾಗಿದ್ದರು. ಸಭೆಯಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಸುಮಾರು 210 ಮಂದಿ ಅಪೇಕ್ಷಿತರು ಭಾಗವಹಿಸಿದ್ದಾರೆ.