ಮಲ್ಪೆಯಲ್ಲಿ ಬೆಂಗಳೂರಿನ ಇಬ್ಬರ ರಕ್ಷಣೆ
ಮಲ್ಪೆ: ಧರ್ಮಸ್ಥಳ ತೀರ್ಥಯಾತ್ರೆ ಮುಗಿಸಿ ಮಲ್ಪೆಗೆ ಬಂದಿದ್ದ ಬೆಂಗಳೂರು ಹೊಸಕೋಟೆಯ ತಾಯಿ ಹಾಗೂ ಮಗು ಸಮುದ್ರದ ಅಲೆಗೆ ಸಿಲುಕಿ ಸ್ಥಳೀಯರ ನೆರವಿನಿಂದ ಪಾರಾದ ಘಟನೆ ಬುಧವಾರ ನಡೆದಿದೆ. 5 ವರ್ಷ ಪ್ರಾಯದ ಸೂರ್ಯ ಸಮುದ್ರ ನೀರಿನಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಸಿಲುಕಿದ್ದು, ಆತನನ್ನು ರಕ್ಷಿಸಲು ತಾಯಿ ಶಿಲ್ಪ ಅವರು ನೀರಿಗಿಳಿದಿದ್ದರು. ಇವರಿಬ್ಬರು ಸಮುದ್ರದ ಅಲೆ ಸೆಳೆತಕ್ಕೆ ಸಿಲುಕಿ ನೀರು ಪಾಲಾದಾಗ ಸ್ಥಳೀಯರು ಸಮುದ್ರಕ್ಕೆ ಧುಮುಕಿ ತಾಯಿ ಮಗು ಇಬ್ಬರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ತಾಯಿ ಶಿಲ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮಗು ಸೂರ್ಯ, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.