30ರಂದು ಶ್ರೀಕೃಷ್ಣ ಮಠ ಯಾತ್ರಿ ನಿವಾಸ ಉದ್ಘಾಟನೆ
ಉಡುಪಿ: ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರ ಮೂಲಸೌಕರ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಶ್ರೀಕೃಷ್ಣಮಠ ಪರಿಸರ ವಿಕಾಸ ಪ್ರತಿಷ್ಠಾನ ಜಂಟಿಯಾಗಿ ನಿರ್ಮಿಸಿರುವ ಯಾತ್ರಿ ನಿವಾಸ ಉದ್ಘಾಟನೆಗೆ ಸಜ್ಜಾಗಿದೆ. ಶ್ರೀಕೃಷ್ಣ ಮಠದ ಗಜಶಾಲೆಯ ಹಿಂಭಾಗದಲ್ಲಿ ಸುಮಾರು 44 ಸೆಂಟ್ಸ್ ಜಾಗದಲ್ಲಿ ಈ ಯಾತ್ರಿ ನಿವಾಸ ನಿರ್ಮಿಸಲಾಗಿದೆ.
ಒಟ್ಟು ರು. 4 ಕೋಟಿಯ ಯೋಜನೆಯಾಗಿದ್ದು, ಸದ್ಯ 2.23 ಕೋಟಿ ವೆಚ್ಚದಲ್ಲಿ ಮೊದಲ ಹಂತ ನಿರ್ಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ 1.23 ಕೋಟಿ (ಕೇಂದ್ರ ಸರ್ಕಾರ ರು. 98.69 ಲಕ್ಷ ಹಾಗೂ ರಾಜ್ಯ ಸರ್ಕಾರ ರು. 24.67 ಲಕ್ಷ), ಪ್ರತಿಷ್ಠಾನದ ವತಿಯಿಂದ ರು. 55 ಲಕ್ಷ, ಪರ್ಯಾಯ ಸೋದೆ ಮಠಾಧೀಶರು ರು. 25 ಲಕ್ಷ, ಪೇಜಾವರ ಮಠಾಧೀಶರು 10 ಲಕ್ಷ ಮತ್ತು ಅದಮಾರು ಮಠಾಧೀಶರು 10 ಲಕ್ಷ ದೇಣಿಗೆ ನೀಡಿದ್ದು, ಜಿಲ್ಲಾಡಳಿತದ ನಿರ್ಮಿತಿ ಕೇಂದ್ರದ ಉಸ್ತುವಾರಿಯಲ್ಲಿ ನಿರ್ಮಿಸಲಾಗಿದೆ. ತಳ ಅಂತಸ್ತು, ನೆಲ ಅಂತಸ್ತು, ಮೊದಲ ಅಂತಸ್ತನ್ನು ಪೂರ್ಣಗೊಳಿಸಲಾಗುತ್ತದೆ. 2ನೇ ಮಹಡಿ ಪೂರ್ಣಗೊಳ್ಳಬೇಕಾಗಿದೆ. ಸಾಮಾನ್ಯ ಭಕ್ತರಿಗೆ ಉಳಿದುಕೊಳ್ಳಲು ಏಕಕಾಲದಲ್ಲಿ ಸುಮಾರು 150 ಜನರಿಗೆ ಅವಕಾಶ ಕೊಡುವ ನಾಲ್ಕು ಡಾರ್ಮೆಟ್ರಿಗಳು, ಒಂದು ಸಭಾಂಗಣ, 25 ಕೊಠಡಿಗಳು ಇವೆ. ಯೋಜನೆ ಪೂರ್ಣಗೊಂಡಾಗ ಒಟ್ಟು 55 ಕೊಠಡಿಗಳು ಉಪಯೋಗಕ್ಕೆ ಲಭ್ಯವಾಗುತ್ತವೆ.
30ರಂದು ಉದ್ಘಾಟನೆ: ಈ ನೂತನ ಯಾತ್ರಿ ನಿವಾಸವನ್ನು 30ರಂದು ಮಧ್ಯಾಹ್ನ 3.39ಕ್ಕೆ ಅಷ್ಟಮಠಾಧೀಶರು, ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಚಿವರಾದ ಆರ್.ವಿ. ದೇಶಪಾಂಡೆ, ವಿನಯಕುಮಾರ ಸೊರಕೆ, ಸಂಸದರು, ಶಾಸಕರು ಮತ್ತಿತರ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಗುವುದು ಎಂದು ಪ್ರತಿಷ್ಠಾನದ ಟ್ರಸ್ಟಿ ರತ್ನಕುಮಾರ್ ತಿಳಿಸಿದ್ದಾರೆ.