ರಸ್ತೆ ನಿರ್ಮಿಸಿ ಮಾದರಿಯಾದ ಯುವಕರು
ಉಪ್ಪಿನಂಗಡಿ: ಜನತೆಯ ಅನುಕೂಲತೆಗಾಗಿ ರಸ್ತೆಯೊಂದರ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಯಾರೂ ಸ್ಪಂದಿಸದೆ ಇದ್ದಾಗ ನಿರಾಸೆ ಮೂಡಲಿಲ್ಲ, ರಸ್ತೆ ನಿರ್ಮಾಣ ಕಾರ್ಯವನ್ನು ತಾವೇ ಮಾಡಿದರೆ ಹೇಗೆ ಎಂಬ ಚಿಂತನೆ ಹೊಳೆದದ್ದೇ ತಡ, ಹಣಕಾಸಿನ ಹೊಂದಿಕೆ ಮಾಡಿ ರು. 1.5 ಲಕ್ಷ ವೆಚ್ಚದಲ್ಲಿ ಒಂದು ಕಿ.ಮೀ. ಉದ್ದದ ರಸ್ತೆಯನ್ನು ಗ್ರಾಮಸ್ಥರೇ ನಿರ್ಮಿಸಿದರು!
ಇಲ್ಲಿನ ಬಜತ್ತೂರು ಗ್ರಾಮದ ವಳಾಲುಪಡ್ಪು ಭಾಗದ ಯುವಕರು ತಮ್ಮ ಸಾಂಘಿಕ ಶ್ರಮದ ಫಲವನ್ನು ಅನಾವರಣಗೊಳಿಸಿದ ರೀತಿ ಇದು.
ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ದೇವಸ್ಥಾನ ಮುದ್ಯ ಪಂಚಲಿಂಗೇಶ್ವರ ದೇವಳ ಹಾಗೂ ಪಡ್ಪು ದೈವಸ್ಥಾನ ಸಂಪರ್ಕಿಸುವ ಮುದ್ಯ (ಉದ್ದರಗುಡ್ಡೆ) ಪಡ್ಪು ನಡುವಿನ 1 ಕಿ.ಮೀ. ರಸ್ತೆಯ ನಿರ್ಮಾಣವಾಗಿ ಪರಿಸರದ ನಿವಾಸಿಗರಿಗೆ ಬಹಳಷ್ಟು ಪ್ರಯೋಜನ ಲಭಿಸಿದೆ.
ನೆರವಿಗೆ ಬಾರದ ಸರ್ಕಾರ: ದೀರ್ಘ ಕಾಲದ ಬೇಡಿಕೆಯಾದರೂ ಗ್ರಾ.ಪಂ. ಆಗಲೀ, ಸರ್ಕಾರವಾಗಲೀ ಈ ಬಗ್ಗೆ ಗಮನ ಹರಿಸದಿದ್ದಾಗ, ಅವರಿವರನ್ನು ಬೇಡುವ ಬದಲು ತಾವೇ ಪ್ರಯತ್ನಿಸಿದರೆ ಯಾಕೆ ಸಾಧ್ಯವಾಗದು ಎಂದು ಸಕಾರಾತ್ಮಕವಾಗಿ ಚಿಂತಿಸಿದ ಸ್ಥಳೀಯ ಯುವಕರು, ರಸ್ತೆಗೆ ಅಗತ್ಯವಾದ ಭೂಮಿ ನೀಡುವಂತೆ ಸ್ಥಳೀಯ ನಿವಾಸಿಗರಿಗೆ ಮನವರಿಕೆ ಮಾಡಿ ಭೂಮಿ ಒದಗಿಸಿದರು. ಬಳಿಕ ಕಾಮಗಾರಿಗೆ ಬೇಕಾದ ಆರ್ಥಿಕ ಮೂಲವನ್ನು ಎಲ್ಲರಿಂದ ಹೊಂದಿಸಿಕೊಂಡು ರಸ್ತೆ ನಿರ್ಮಾಣ ಮಾಡಿಯೇ ಬಿಟ್ಟರು. ಗದ್ದೆ ಪುಣಿಯಲ್ಲಿ ಸಂಚರಿಸಬೇಕಾದ ಸ್ಥಿತಿ ಇದ್ದುದನ್ನು ಮನೆಯಂಗಳಕ್ಕೆ ವಾಹನ ಬರುವಂತೆ ಪರಿವರ್ತಿಸಲಾಯಿತು.
ಈ ಸಮಾಜಮುಖಿ ಕಾರ್ಯವನ್ನು ಕೆಎಸ್ಆರ್ಟಿಸಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಗೋಪಾಲ ಗೌಡ ದಡ್ಡು ಮುಂದಾಳತ್ವದಲ್ಲಿ ನಡೆಸಲಾಗಿದೆ. ಗೋಪಾಲ ಗೌಡರೊಂದಿಗೆ ಮೌರಿಸ್ ಡಿಸೋಜ, ಸಂಜೀವ ಗೌಡ ನಡುವಡ್ಕ, ಸುರೇಶ್ ಗೌಡ, ಲಿಂಗಪ್ಪ ಗೌಡ ನಡುವಡ್ಕ, ಪೂವಪ್ಪ ನಂಜಾಳಿ, ಅವಿತ್ ಮುದ್ಯ, ಪೂವಪ್ಪ ನಾಯ್ಕ್, ಕುಶಾಲಪ್ಪ ಅರ್ಬಿ ಕೈ ಜೋಡಿಸಿದ್ದರು. ಬಜತ್ತೂರು ಗ್ರಾ.ಪಂ. ಮಾಜಿ ಸದಸ್ಯ ಪಾಲ್ ಡಿಸೋಜ, ಸಮತಾ ಮುದ್ಯ, ಪ್ರಮುಖರಾದ ಕೆ.ಎಸ್. ರಾಧಾಕೃಷ್ಣ ಕುವೆಚ್ಚಾರು, ಕೆಎಸ್ಆರ್ಟಿಸಿ ಚಾಲಕ ನಾರಾಯಣ ಪೂಜಾರಿ, ಮಾಣಿಕ್ಯ ರಾಜ್ ಪಡಿವಾಳ್, ವಾಸು ದಡ್ಡು ಮೊದಲಾದವರು ಇಲ್ಲಿನ ಯುವಕರ ಕಾರ್ಯಕ್ಕೆ ಪ್ರೋತ್ಸಾಹದ ನಡೆ ತೋರಿದ್ದಾರೆ.
ರಸ್ತೆಗೆ ಅಗತ್ಯವಾದ ಭೂಮಿಯನ್ನು ಅನಂತಕೃಷ್ಣ ಉಡುಪ, ವೀರಮ್ಮ ನಂಜಾಳಿ, ಚನ್ನಕ್ಕ ನಡುವಡ್ಕ, ಹರಿಯಪ್ಪ ಗೌಡ ನಡುವಡ್ಕ, ವೆಂಕಪ್ಪ ನಾಯ್ಕ, ಶಿವಪ್ಪ ನಾಯ್ಕ, ಮೌರಿಸ್ ಡಿಸೋಜ ಮುದ್ಯ, ಯೂಸುಫ್ ಪಡ್ಪು, ವೀರಪ್ಪ ನಾಯ್ಕ್, ಮಹೇಂದ್ರ ವರ್ಮ ಪಡ್ಪು ಹಾಗೂ ಬಜತ್ತೂರು ಗ್ರಾ.ಪಂ. ಸದಸ್ಯ ಸೇಸಪ್ಪ ಗೌಡ ದಡ್ಡು ಮೊದಲಾದವರು ಉದಾರವಾಗಿ ನೀಡಿ ಔದಾರ್ಯ ಮೆರೆದಿದ್ದಾರೆ.
2 ಸೇತುವೆಗಳ ನಿರ್ಮಾಣ ಉದ್ದೇಶ: ನಿರ್ಮಾಣಗೊಂಡ ರಸ್ತೆ ಇನ್ನೂ ಮುಂದುವರಿದು ರಾಷ್ಟ್ರೀಯ ಹೆದ್ದಾರಿಯನ್ನು ಸೇರಿದರೆ ಇನ್ನಷ್ಟು ಪ್ರಯೋಜನ ಲಭಿಸಲಿದ್ದು, ಅದಕ್ಕಾಗಿ ಆ ಭಾಗದ ಜನತೆಯಿಂದ ಭೂಮಿ ದಾನದ ನಿರೀಕ್ಷೆ ಇರಿಸಲಾಗಿದೆ. ಮಾತ್ರವಲ್ಲದೆ, ಈ ರಸ್ತೆ ಸರ್ವ ಋತು ರಸ್ತೆಯಾಗಿ ಬಳಕೆಯಾಗಲು ಎರಡು ಸೇತುವೆಗಳ ಅಗತ್ಯವಿದ್ದು, ಜಿ.ಪಂ. ಸದಸ್ಯ ಕೇಶವ ಗೌಡ ಬಜತ್ತೂರು ಅವರು ಒಂದು ಸೇತುವೆಗೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೊಂದು ಸೇತುವೆಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಲು ಸ್ಥಳಿಯರು ಉದ್ದೇಶಿಸಿದ್ದಾರೆ.