ಸುರತ್ಕಲ್: ನಾಳೆಯಿಂದ ಯಕ್ಷೋಪಾಸನಾ ಶಿಬಿರ
ಮಂಗಳೂರು: ಯಕ್ಷಾರಾಧನಾ ಕಲಾ ಕೇಂದ್ರದ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಡಿ. 28 ರಿಂದ 31ರವರೆಗೆ ಸುರತ್ಕಲ್ ಇಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ 'ಯಕ್ಷೋಪಾಸನಾ ಶಿಬಿರ' ನಡೆಯಲಿದೆ.
ಶಿಬಿರವನ್ನು ಬೆಳಗ್ಗೆ 9.30ಕ್ಕೆ ಇಡ್ಯಾ ದೇವಸ್ಥಾನದ ಆಡಳಿತ ಮೊಕ್ತೇಸರ ಐ. ರಮಾನಂದ ಭಟ್ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸುವರು. ನಿವೃತ್ತ ಪತ್ರಕರ್ತ ಐ. ವಿದ್ಯಾಧರ, ನಾಟ್ಯಾಂಜಲಿ ಸಂಸ್ಥಾಪಕ ಚಂದ್ರಶೇಖರ್ ನಾವಡ ಪಾಲ್ಗೊಳ್ಳುವರು ಎಂದು ಕಲಾಕೇಂದ್ರದ ಅಧ್ಯಕ್ಷೆ ಸುಮಂಗಲಾ ರತ್ನಾಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಬಿರದಲ್ಲಿ ತೆಂಕುತಿಟ್ಟು ಯಕ್ಷ ನಾಟ್ಯಗಾರಿಕೆಯ ನಾಟ್ಯ ವೈವಿದ್ಯತೆ, ನಾಟ್ಯಾಭಿನಯ ಕುರಿತು ತಿಳಿಸಿಕೊಡಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಯಕ್ಷಗಾನ ಕಲಾವಿದರಾದ ಬಲಿಪ ನಾರಾಯಣ ಭಾಗವತರು, ಗೋವಿಂದ ಭಟ್ ಸೂರಿಕಮೇರ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಉಮೇಶ್ ಶೆಟ್ಟಿ ಉಬರಡ್ಕ, ದಿವಾಣ ಶಿವಶಂಕರ ಭಟ್, ರಮೇಶ್ ಶೆಟ್ಟಿ ಬಾಯಾರು, ತಾರಾನಾಥ ಬಲ್ಯಾಯ ವರ್ಕಾಡಿ ಪಾಲ್ಗೊಳ್ಳುವರು ಎಂದರು.