ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಕ್ಕಳೊಂದಿಗೆ ಗೃಹಿಣಿ ಆತ್ಮಹತ್ಯೆ ಪ್ರಕರಣ; ಆರೋಪಿ ಪತಿ ಸೆರೆ

Vishwanath S
Updated On : 28 Dec 2013, 11:28 am

ಬಂಟ್ವಾಳ: ಗಂಡನ ಕಿರುಕುಳದಿಂದ ಮನನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ನೇತ್ರಾವತಿ ರೇಲ್ವೇ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ದೆಹಲಿ ವಿಮಾನದಲ್ಲಿ ಬಂಧಿಸಿರುವ ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಟ್ವಾಳ ನಗರ ಠಾಣೆಗೆ ಕರೆತಂದಿದ್ದಾರೆ. ಬಿ.ಮೂಡ ಗ್ರಾಮದ ಅನ್ವರ್ ಸಾದಿಕ್ ಬಂಧಿತ ಆರೋಪಿ.
ಬಂಟ್ವಾಳ ನಗರ ಠಾಣೆಯ ಎ.ಎಸ್.ಐ ಬಾಲಕೃಷ್ಣ ಹಾಗೂ ಸಿಬ್ಬಂದಿ ಹರೀಶ್ ಭಟ್ ಆರೋಪಿಯದೆಹಲಿಯಿಂದ ಕರೆ ತಂದಿದ್ದಾರೆ.
ಪ್ರಕರಣ ಹಿನ್ನೆಲೆ: ಜೂ.19ರಂದು ಅನ್ವರ್ ಸಾದಿಕ್ ಪತ್ನಿ ಮಮ್ತಾಜ್ (28) ತನ್ನ ಮಕ್ಕಳಾದ ಫಾತಿಮಾ ನೈಸನ್ (8) ಹಾಗೂ ಖತೀಜ ನೈಫ (5) ರೊಂದಿಗೆ ಕಲ್ಲಾಪು ರೇಲ್ವೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಳಿಕ ಬಂಟ್ವಾಳ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿತ್ತು.
ಅನ್ವರ್ ಸಾದಿಕ್ ಪತ್ನಿ ಮಮ್ತಾಜ್‌ಗೆ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು 'ನೀನು ಹಾಗೂ ನಿನ್ನ ಮಕ್ಕಳು ಎಲ್ಲಿಯಾದರೂ ಹೋಗಿ ಸತ್ತು ಬಿಡಿ. ನನಗೆ ನೀನು ಬೇಡ, ನಿನ್ನ ಮಕ್ಕಳು ಬೇಡ' ಎಂದು ಮಾನಸಿಕವಾಗಿ ಹಿಂಸಿಸುತ್ತಿದ್ದ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಸಾದಿಕ್ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದು, ಡಿ.18ರಂದು ವಾಪಸಾಗುತ್ತಿದ್ದ ವೇಳೆ ದೆಹಲಿ ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಈತನನ್ನು ಬಂಧಿಸಿದ್ದರು.
ಬಂಧಿತ ಆರೋಪಿಯನ್ನು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಗ್ನಿ ಅವಘಡ; ಮೊಬೈಲ್ ಗೋಪುರದ ಶೆಲ್ಟರ್ ಭಸ್ಮ
ಗಂಗೊಳ್ಳಿ: ಮೊಬೈಲ್ ಟವರ್ ಬಳಿ ಅಗ್ನಿ ಅವಘಡ ಸಂಭವಿಸಿ ಟವರ್‌ನ ಶೆಲ್ಟರ್ ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದ ಘಟನೆ ಗುರುವಾರ ಮಧ್ಯಾಹ್ನ ಗಂಗೊಳ್ಳಿಯ ಎಸ್.ವಿ. ಜ್ಯೂನಿಯರ್ ಕಾಲೇಜು ಸಮೀಪ ನಡೆದಿದೆ.
ಗುರುವಾರ ಮಧ್ಯಾಹ್ನ ಉಡುಪಿಯ ಎಸೆಂಡ್ ಟೆಲಿಕಾಂನವರ ಐಡಿಯಾ ಮೊಬೈಲ್ ಟವರ್ ಶೆಲ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲೇ ಬೆಂಕಿ ಇಡೀ ಶೆಲ್ಟರ್ ಆವರಿಸಿ ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದಲ್ಲಿದ್ದ ಗಿಡಮರಗಳು ಸುಟ್ಟು ಹೋಗಿದ್ದು, ಬೆಂಕಿ ಹೊತ್ತಿಕೊಂಡ ಸಂದರ್ಭ ವಿದ್ಯುತ್ ಸರಬರಾಜು ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಬೆಂಕಿ ಅವಘಢ ಸಂಭವಿಸಿ ಸುಮಾರು ಅರ್ಧಗಂಟೆಯಾದರೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸದಿದ್ದಾಗ ಸ್ಥಳೀಯರೇ ನೀರು ಹಾಕಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಸ್ಥಳೀಯರೇ ಬೆಂಕಿ ನಂದಿಸಿದ್ದರು.
ಎಂಡೋ ಪೀಡಿತ ಮೃತ
ಉಪ್ಪಿನಂಗಡಿ: ಎಂಡೋ ಪೀಡಿತನಾಗಿ ಬಳಲುತ್ತಿದ್ದ ಪುತ್ತೂರು ತಾಲೂಕು ಪೆರಾಬೆ ಗ್ರಾಮ ಸುರುಳಿ ಅಣ್ಣು ನಾಯ್ಕ ಅವರ ಪುತ್ರ ಕಮಲಾಕ್ಷ (30) ಶುಕ್ರವಾರ ಬೆಳಗ್ಗೆ ತಮ್ಮ ಮನೆಯಲ್ಲಿ ನಿಧನರಾದರು. ಮೃತ ಕಮಲಾಕ್ಷ ಲಾರಿ ಚಾಲಕನಾಗಿ ದುಡಿಯುತ್ತಿದ್ದು, ಕಳೆದ ಒಂದು ವರ್ಷದಿಂದ ಎಂಡೋ ದುಷ್ಪರಿಣಾಮದಿಂದ ಕ್ಯಾನ್ಸರ್‌ಗೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ತಂದೆ, ತಾಯಿ, ಇಬ್ಬರು ಸಹೋದರ, ಇಬ್ಬರು ಸಹೋದರಿಯರು ಇದ್ದಾರೆ.
ಮೂಲ್ಕಿ-ಕಾರ್ನಾಡು
ರಸ್ತೆ  ಡಾಂಬರೀಕರಣ
ಮೂಲ್ಕಿ: ಮೂಲ್ಕಿ ನಗರ ಪಂಚಾಯಿತಿಯ ನಗರೋತ್ಥಾನ ಅನುದಾನದಲ್ಲಿ ಮೂಲ್ಕಿ ನಪಂ ವ್ಯಾಪ್ತಿಯಲ್ಲಿ ರಸ್ತೆ ಡಾಮರೀಕರಣ, ಕಾಂಕ್ರಿಟೀಕರಣಕ್ಕೆ 5 ಕೋಟಿ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದೆ. ಮುಂದಿನ ಹತ್ತು ದಿನಗಳಲ್ಲಿ ಮೂಲ್ಕಿ- ಕಾರ್ನಾಡು ರಸ್ತೆ ಡಾಮರೀಕರಣಗೊಳ್ಳಲಿದ್ದು ರಿಕ್ಷಾ, ಕಾರು ಚಾಲಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮೂಲ್ಕಿ ನಪಂ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೀವನದಲ್ಲಿ ಜಿಗುಪ್ಸೆ; ಮಹಿಳೆ ಆತ್ಮಹತ್ಯೆ
ಕಾರ್ಕಳ: ಜಿಗುಪ್ಸೆಗೊಂಡು ಮಹಿಳೆಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರ್ಗಾನ ಗ್ರಾಮದ ತುಂಬೆ ಹಿತ್ಲು ಬೈಲುಮನೆಯಲ್ಲಿ ಗುರುವಾರ ನಡೆದಿದೆ. ಮೃತರು ಸುನಂದ (55). ಇವರು ಹಲವು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತಿದ್ದರು. ಚಿಕಿತ್ಸೆ ಮಾಡಿದರೂ ಗುಣಮುಖರಾಗದೇ ಇದ್ದ ಕಾರಣ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಮಗ ಶಶಿಕಾಂತ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಹಾರಿ
ವ್ಯಕ್ತಿ ಆತ್ಮಹತ್ಯೆ
ಗಂಗೊಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಇಲ್ಲಿನ   ಸಾಂತಯ್ಯನ ಕೇರಿ ಎಂಬಲ್ಲಿ ನಡೆದಿದೆ. ಮೃತರು ಸಂತೋಷ ಕುಮಾರ. ಇವರು ಎ.ಐ.ಎಫ್. ನಲ್ಲಿ ಕೆಲಸದಲ್ಲಿದ್ದು 6 ತಿಂಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದರು. ಇದೇ ಚಿಂತೆಯಿಂದ ನೊಂದು ಗುರುವಾರ ಬೆಳಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನರಸಿಂಹ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‌ನಿಂದ ಬಿದ್ದ ಗಾಯಾಳು ಸಾವು
ಮಲ್ಪೆ: ಹೂಡೆ ಎಂಬಲ್ಲಿ ಬೈಕ್‌ನಿಂದ ಜಾರಿ ಬಿದ್ದು ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರು ಕೊಡವೂರು ಗ್ರಾಮದ ನಿವಾಸಿ ಹರೀಶ್ ಕುಮಾರ್. ಬುಧವಾರ ಗೆಳೆಯನ ಬೈಕ್‌ನಲ್ಲಿ ಹೂಡೆಗೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ತಲೆಯ ಎಡ ಭಾಗಕ್ಕೆ ಗಾಯಗೊಂಡಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ
ಮೃತಪಟ್ಟರು. ಗೆಳೆಯ ಗಣೇಶ ತಿಂಗಳಾಯ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಅಡ್ಡಗಟ್ಟಿ
ಹಲ್ಲೆ; ವ್ಯಕ್ತಿ ಗಂಭೀರ
ಮೂಲ್ಕಿ; ಮೂಲ್ಕಿಯ ಕಾರ್ನಾಡಿನ ಜಂಕ್ಷನ್ ಸಮೀಪದ ಕೋಟ್ಯಾನ್ ಚಿಕನ್ ಸೆಂಟರ್ ಎದುರು ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ಮಾನಂಪಾಡಿ ನಿವಾಸಿ ಕಿರಣ್ ಕುಮಾರ್‌ಗೆ ಎದುರಿನಿಂದ ಬೈಕ್‌ನಲ್ಲಿ ಬರುತ್ತಿದ್ದ ಹಳೆಯಂಗಡಿ ಕದಿಕೆ ನಿವಾಸಿಗಳಾದ ಫಯಾಜ್ ಮತ್ತು ಇಮ್ತಿಯಾಜ್ ಅಡ್ಡ ಹಾಕಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದಿ. ಗಂಭೀರ ಗಾಯಗೊಂಡ ಕಿರಣ್ ಕುಮಾರ್ ಮೂಲ್ಕಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೇಲಿ ವಿವಾದ:
ತಂಡದಿಂದ ಹಲ್ಲೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ಅಣಬೆಕೋಡಿ ಎಂಬಲ್ಲಿ ಬೇಲಿ ವಿವಾದದಿಂದ ಉಂಟಾದ ಮಾತಿನ ಚಕಮಕಿ ಹಲ್ಲೆಗೆ ಕಾರಣವಾದ ಘಟನೆ ನಡೆದಿದೆ.
ಸುಲೈಮಾನ್, ಅಬೂಬಕ್ಕರ್ ಮತ್ತು ಬೀಪಾತುಮ್ಮ ಎಂಬವರಿಗೆ ಇಸುಬು, ಹಮೀದ್, ನಝೀರ್, ಮತ್ತು ಖತಿಜಮ್ಮ ಎಂಬವರು ಅಡಕೆ ಮರದ ಸಲಾಕೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಹಲ್ಲೆಗೀಡಾದವರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನೇಣು ಬಿಗಿದು
ಗೃಹಿಣಿ ಆತ್ಮಹತ್ಯೆ
ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಬಿಳೆನೆಲೆ ಗ್ರಾಮದ ಕೈಕಂಬ  ನಾಗರಕಟ್ಟೆ ನಿವಾಸಿ ಶಶಿ (30) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಮಂಜುನಾಥ ಎಂಬವರ ಪತ್ನಿಯಾಗಿರುವ ಈಕೆ ಎರಡು ಮಕ್ಕಳ ತಾಯಿಯಾಗಿದ್ದು, ಗಂಡನೊಂದಿಗಿನ ವಿರಸದಿಂದ ಬೇಸತ್ತು ಈ ಕೃತ್ಯ ನಡೆಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.  ಕಡಬ ಪೊಲೀಸರು ಪ್ರಕರಣವನ್ನು ದಾಖಲಿಸಿತನಿಖೆ ನಡೆಸುತ್ತಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಕೆರೆಯ ದೇವಸ್ಥಾನದಲ್ಲಿ ಅಪರಿಚಿತ ಗಂಡಸಿನ ಮೃತದೇಹ ಗುರುವಾರ ಕಂಡು ಬಂದಿದೆ. ಮೃತರು ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಾಗ ಆಕಸ್ಮಿಕ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಭಾಕರ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ: ಬೈಕ್ ಸಹಿತ ಇಬ್ಬರು ಶಂಕಿತರು ವಶಕ್ಕೆ
ವಿಟ್ಲ: ವಿಟ್ಲ ಪೊಲೀಸರು ಕಾಶಿಮಠ ಎಂಬಲ್ಲಿ ಶುಕ್ರವಾರ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ವಾಹನ ಸಹಿತ ವಶಪಡಿಸಿಕೊಂಡ ಘಟನೆ ನಡೆದಿದೆ. ಕೋಣಾಜೆ ಸಮೀಪದ ಫಜೀರು ಜೋಗಿಬೆಟ್ಟು ನಿವಾಸಿ ಲತೀಫ್ ಅವರ ಪತ್ರ ನಾಸೀರ್ ಯಾನೆ ಮಹಮ್ಮದ್ ನಾಸೀರ್(19) ಹಾಗೂ ಉತ್ತರಕನ್ನಡ ಜಿಲ್ಲೆಯ ಮಾವಳ್ಳಿ ಗ್ರಾಮದ ನೂರ್ ಮಂರಝ್ ನಿವಾಸಿ ಇಸಾಕ್ ಅವರ ಪುತ್ರ ಸಲೀಂ (20) ಬಂಧಿತ ಆರೋಪಿಗಳು.  ಇವರು ಶುಕ್ರವಾರ ಬೆಳಗ್ಗೆ ಕಾಸರಗೋಡು ರಸ್ತೆಯಲ್ಲಿ ವಿಟ್ಲ ಕಡೆಗೆ ನೋಂದಣಿ ಇಲ್ಲದ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದರು. ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಹಾಗೂ ಸಿಬ್ಬಂದಿ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ಬೈಕಿನಲ್ಲಿದ್ದ ಬಂದವರನ್ನು ವಿಚಾರಣೆ ನಡೆಸಿದ ಅವರು ಸಮರ್ಪಕ ವಿವರ ಹಾಗೂ ಬೈಕಿನಲ್ಲಿ ಯಾವುದೇ ದಾಖಲೆಗಳು ಇರದ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.  ಬಂಧಿತರಿಂದ ಬೈಕ್, ಮೊಬೈಲ್ ಹಾಗೂ ರು. ಒಂದು ಸಾವಿರ ನಗದು ವಶಪಡಿಸಲಾಗಿದೆ. ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಭಿನ್ನಕೋಮಿನ
ಜೋಡಿಗೆ ಹಲ್ಲೆಪ್ರಕರಣ: ನಾಲ್ವರು ಯುವಕರ ಬಂಧನ
ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಬುಧವಾರ ಭಿನ್ನ ಕೋಮಿನ ಜೋಡಿಯ ಮೇಲಿನ ಹಲ್ಲೆ ನಡೆಸಿದ ಆರೋಪದ ಮೇಲೆ 4 ಮಂದಿ ಯುವಕರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
 ಪಿಲಿಕುಳ ಪ್ರದೇಶದ ಸಂಘಟನೆಯೊಂದರ ಕಾರ್ಯಕರ್ತರಾದ ಕುಮಾರ್(23), ನಿತಿನ್(22), ಕಿರಣ್(24), ರವಿ(25) ಬಂಧಿತರು.
 ಗುರುವಾರ ಘಟನೆಯ ಬಗ್ಗೆ ಫರಂಗಿಪೇಟೆ ಸೈಫುಲ್ಲಾ ಅವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
 ಪಿಲಿಕುಳ ನಿಸರ್ಗಧಾಮದಲ್ಲಿ ಸಂಘಟನೆಯ ಕಾರ್ಯಕರ್ತರೆನ್ನಲಾದ ಕೆಲವು ಜನ, ಯುವಜೋಡಿಯನ್ನು ಹಿಡಿದು, ಯುವಕನ ಮೇಲೆ ಹಲ್ಲೆ ನಡೆಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು.
 ದೂರು ಕೊಟ್ಟಿಲ್ಲದ ಕಾರಣ ಪ್ರಕರಣ ದಾಖಲಾಗಿರಲಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement