ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್; ಭರದಿಂದ ನಡೆಯುತ್ತಿದೆ 2ನೇ ಹಂತದ ಕಾಮಗಾರಿ
ಸುಬ್ರಹ್ಮಣ್ಯ: ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ನೇರ ನಿಯಂತ್ರಣದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು, ಸಮಗ್ರವಾಗಿ ಶ್ರೀ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ 2008ರಲ್ಲಿ 180 ಕೋಟಿ ವೆಚ್ಚದ ಮಾಸ್ಟರ್ ಪ್ಲಾನ್ ಯೋಜನೆಯನ್ನು ಮೂರು ಹಂತಗಳಲ್ಲಿ ಕಾಮಗಾರಿ ನಡೆಸಲು ಆದೇಶಿಸಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಂ.ವಿ. ವೇದಮೂರ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೇದಮೂರ್ತಿ, ಆ ಪ್ರಕಾರ ಪ್ರಥಮ ಹಂತದಲ್ಲಿ ಒಟ್ಟು 9 ಕಟ್ಟಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ವಿವಿಐಪಿಗಳಿಗಾಗಿ ಆದಿಶೇಷ ವಸತಿ ಗೃಹ, ಸರ್ಪಸಂಸ್ಕಾರ ಭಕ್ತಾದಿಗಳಿಗೆ ಭೋಜನ ಶಾಲೆ, ಯಾಗಶಾಲೆ, ಅನಂತ ಮತ್ತು ಅಭಯ ವಸತಿಗೃಹಗಳು, ವರದಾ-ವಸುಧಾ ಕಾಟೇಜ್ಗಳು, ಸಾರ್ವಜನಿಕ ಶೌಚಾಲಯ, ಬಿಲದ್ವಾರ ಮತ್ತು ಸವಾರಿ ಮಂಟಪದ ಬಳಿ ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ 8 ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಯಾಗಿವೆ. ಆದಿಸುಬ್ರಹ್ಮಣ್ಯದ ಬಳಿ 184 ಕೊಠಡಿಯ ವಸತಿಗೃಹ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದಿನ 2ನೇ ಹಂತದ ಕಾಮಗಾರಿಗಳ ಪೈಕಿ ದಾಸೋಹವನ್ನು ಷಣ್ಮುಖ ಪ್ರಸಾದ ಭೋಜನಶಾಲೆಯ ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಉಳಿದ ಎಲ್ಲ ಕಟ್ಟಡ ಕಾಮಗಾರಿಗಳನ್ನು ಶ್ರೀ ದೇವಳದ ಪಟ್ಟಾ ಸ್ಥಳವಿರುವ ಇಲಾಖೆ ತೋಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಎಂದು ತಿಳಿಸಿದರು.
2ನೇ ಹಂತದಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯನ್ನು ಶ್ರೀದೇವಳದ ಕಟ್ಟಡಗಳಿಗೆ ಮಾತ್ರ ಮೀಸಲಿರಿಸದೆ ಸಂಪೂರ್ಣ ಶ್ರೀ ಕ್ಷೇತ್ರದ ನಾಗರಿಕರಿಗೆ ದೊರಕುವ ಉದ್ದೇಶದಿಂದ ತ್ಯಾಜ್ಯ ಶುದ್ಧೀಕರಣ ಘಟಕವನ್ನು ತಾಂತ್ರಿಕವಾಗಿ ಸೂಕ್ತವೆನಿಸಿದ ಭಾಗದಲ್ಲಿಯೇ ನಿರ್ಮಿಸಲು ಉದ್ದೇಶಿಸಲಾಗಿದ್ದು ಈ ಕಾಮಗಾರಿಯು ಡಿ.6ರಂದು ಆರಂಭಗೊಂಡಿದೆ ಎಂದರು.
ಮಾಸ್ಟರ್ ಪ್ಲಾನ್ ಕಾಮಗಾರಿಗೆ ಪೂರಕವಾದ ಹಾಗೂ ಕ್ಷೇತ್ರದ ಆಸುಪಾಸಿನ ಗ್ರಾಮಗಳಿಗೆ ನಿರಂತರ ವಿದ್ಯುತ್ ನೀಡುವ ಬಗ್ಗೆ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ಕ್ರಮಕೈಗೊಂಡು, ಶ್ರೀ ದೇವಳದ ಮಲ್ಲಿಗೆಮಜಲಿನ 63 ಸೆಂಟ್ಸ್ ವರ್ಗ ಸ್ಥಳವನ್ನು ಲೀಸ್ ಮೂಲಕ ವಿದ್ಯುತ್ ಉಪಕೇಂದ್ರ ನಿರ್ಮಿಸಲು ಮೆಸ್ಕಾಂಗೆ ನೀಡಲಾಗಿದ್ದು ಈ ಕಾಮಗಾರಿ ಪ್ರಗತಿಯಲ್ಲಿದೆ. 2ನೇ ಮತ್ತು 3ನೇ ಹಂತದಲ್ಲಿ ಕ್ಷೇತ್ರವ್ಯಾಪ್ತಿಯ ಸುಮಾರು 9.40 ಕಿ.ಮೀ. ವಿವಿಧ ರಸ್ತೆಗಳನ್ನು ಮತ್ತು ಕಿರುಸೇತುವೆಗಳನ್ನು 51.40 ಕೋಟಿ ವೆಚ್ಚದಲ್ಲಿ ಪ್ರಾರಂಭಿಸುವ ಬಗ್ಗೆ ಈಗಾಗಲೇ ಅನುಮತಿ ನೀಡಲಾಗಿದೆ. ಈ ಕಾಮಗಾರಿಯು ಲೋಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿ ನಿರ್ವಹಿಸಲ್ಪಡುತ್ತಿದೆ. ಅದೇ ರೀತಿ 2ನೇ ಹಂತದಲ್ಲಿ ಡಾರ್ಮೆಟರಿ ಕಟ್ಟಡ, ಸಿಬ್ಬಂದಿ ವಸತಿಗೃಹ, ಮುಡಿಶೆಡ್, ರಥಶೆಡ್, ನೌಕರರ ವಸತಿಗೃಹ, ಶಾಪಿಂಗ್ ಕಾಂಪ್ಲೆಕ್ಸ್, ದಾಸೋಹವನ, 150 ಕೊಠಡಿಗಳ ವಸತಿಗೃಹಗಳು, ಹಣ್ಣುಕಾಯಿ, ಬೆಳ್ಳಿ ಅಂಗಡಿ ಇತ್ಯಾದಿ ಕಟ್ಟಡಗಳನ್ನು ಆದ್ಯತೆ ಮೇರೆಗೆ ನಿರ್ಮಿಸಲಾಗುವುದು ಎಂದು ಆಯುಕ್ತರು ತಿಳಸಿದರು.
ಸುದ್ದಿಗೋಷ್ಠಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಉಪಸ್ಥಿತರಿದ್ದರು.