ಬಸ್ ರೇಡಿಯೇಟರ್ನಿಂದ ಬಿಸಿ ನೀರು ಚಿಮ್ಮಿ ಮಹಿಳೆಗೆ ಗಾಯ
ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ನೋರ್ವನ ಪ್ರಮಾದದಿಂದಾಗಿ ಬಸ್ ರೇಡಿಯೇಟರ್ನಿಂದ ಚಿಮ್ಮಿದ ಬಿಸಿ ನೀರು ತಗುಲಿ ಮಹಿಳಾ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಂಗಳೂರಿನಿಂದ ಹಾಸನದತ್ತ ಹೊರಟಿದ್ದ ಬಸ್ ಫರಂಗಿಪೇಟೆ ಟೋಲ್ಗೇಟ್ ಸಮೀಪ ಬಂದಾಗ ಬಸ್ಸಿನೊಳಗೆ ದಟ್ಟ ಹೊಗೆ ಕಾಣಿಸಿತು. ತಾಂತ್ರಿಕ ದೋಷವೇನಾದರೂ ಉಂಟಾಗಿರುವ ಸಾಧ್ಯತೆಯನ್ನು ಅಂದಾಜಿಸಿದ ಚಾಲಕ ಬಸ್ಸನ್ನು ಬಿ.ಸಿ. ರೋಡ್ನಲ್ಲಿರುವ ಕೆಎಸ್ಆರ್ಟಿಸಿ ಘಟಕಕ್ಕೆ ಕೊಂಡೊಯ್ದರು. ಅಲ್ಲಿನ ಮ್ಯಾಕಾನಿಕ್ ಬಸ್ ಪರಿಶೀಲಿಸಿ ಬಸ್ಸಿನ ಫ್ಯಾನ್ ಬೆಲ್ಟ್ ತುಂಡಾಗಿರುವುದನ್ನು ಪತ್ತೆ ಹಚ್ಚಿದರು. ಹೊಸ ಫ್ಯಾನ್ ಬೆಲ್ಟ್ ಅಳವಡಿಸಲಾಯಿತು. ಈ ಮಧ್ಯೆ ಬಸ್ಸಿನ ರೆಡಿಯೇಟರ್ ಕೂಡ ಬಿಸಿಯೇರಿದ್ದು, ಅದರಲ್ಲಿದ್ದ ನೀರು ಮುಗಿದಿರುವ ಸಾಧ್ಯತೆಯನ್ನು ಅಂದಾಜಿಸಿದ ಮ್ಯಾಕಾನಿಕ್, ಅದರ ಮುಚ್ಚಳ ತೆಗೆಯಲೆತ್ನಿಸಿದಾಗ ಅತ್ಯಧಿಕ ಉಷ್ಣತೆಗೆ ಸಿಲುಕಿದ ನೀರು ಹೊರಸೂಸುವ ಲಕ್ಷಣಗಳು ಕಂಡುಬಂದವು. ಬರಿ ಕೈಯಲ್ಲೇ ಒಂದಷ್ಟು ಹೊತ್ತು ಮುಚ್ಚಳ ಹಿಡಿದುಕೊಂಡ ಮ್ಯಾಕಾನಿಕ್ ಕೈಸುಡುವ ಲಕ್ಷಣ ಕಂಡು ಬಂದಾಗ ಕೈ ಬಿಟ್ಟು ಬಿಟ್ಟ. ಪರಿಣಾಮ ರೆಡಿಯೇಟರ್ನಿಂದ ಒಮ್ಮೆಗೆ ಹೊರಚಿಮ್ಮಿದ ಬಿಸಿ ನೀರು ಮುಂಭಾಗದ ಆಸನದಲ್ಲಿ ಕುಳಿತಿದ್ದ ಸಕಲೇಶ್ಪುರ ನಿವಾಸಿ ಹೀನಾಭಾನು ಎಂಬಾಕೆ ಮೈಮೇಲೆ ಚಿಮ್ಮಿತು. ಆಕೆಯ ಸೊಂಟದಿಂದ ಕೆಳಭಾಗ ಬಿಸಿನೀರಿನಿಂದ ಗಂಭೀರ ಗಾಯಗಳಾದವು. ಬಿಸಿ ನೀರಿನಿಂದಾಗಿ ಮಹಿಳೆಯ ಕಾಲಿನ ಭಾಗವೆಲ್ಲ ಸುಟ್ಟು ಹೋಗಿದ್ದು, ಗಾಯಾಳುವನ್ನು ಆಟೊದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆ ಬಳಿಕ ಬಸ್ಸಿನ ಉಳಿದ ಪ್ರಯಾಣಿಕರನ್ನು ಬದಲಿ ಬಸ್ಸುಗಳಲ್ಲಿ ಪ್ರಯಾಣ ಮುಂದುವರಿಸಲು ಅವಕಾಶ ಕಲ್ಪಿಸಿದರು. ಗಾಯಾಳು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.