ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಡೆಕೋಲು: ಅಪರಾಧ ಮುಕ್ತ ಗ್ರಾಮಕ್ಕೆ ಚಾಲನೆ

Vishwanath S
Updated On : 29 Dec 2013, 12:17 pm

ಸುಳ್ಯ: ವಿಜ್ಞಾನದ ಬೆಳವಣಿಗೆಯೊಂದಿಗೆ ಸಾಮಾಜಿಕ ಪರಿವರ್ತನೆಯೂ ಅಷ್ಟೇ ವೇಗವಾಗಿ ನಡೆಯಬೇಕು. ನಂಬಿಕೆ, ವಿಶ್ವಾಸಗಳು ಬೆಳೆಯುವ ರೀತಿಯಲ್ಲಿ ಸಮಾಜ ಪರಿವರ್ತನೆ ಆಗಬೇಕು. ಇದು ಗ್ರಾಮದಿಂದಲೇ ಆರಂಭವಾಗಬೇಕು ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷದ ನಾಯಕ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
 ಮಂಡೆಕೋಲಿನಲ್ಲಿ ಅಪರಾಧ ಮುಕ್ತ ಗ್ರಾಮ ಜನಾಂದೋಲನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
 ಅಪರಾಧ ಮುಕ್ತ ಗ್ರಾಮ ಎನ್ನುವುದು ಒಂದು ಹೊಸ ಅನ್ವೇಷಣೆ, ಹೊಸ ಕ್ರಾಂತಿಕಾರಿ ಹೆಜ್ಜೆ. ಇದನ್ನು ಅನುಷ್ಠಾನ ಮಾಡುತ್ತಿರುವ ಗ್ರಾಮ ಪಂಚಾಯಿತಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಡೀವಿ, ಪಂಚಾಯಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮತ್ತವರ ತಂಡದ ಶ್ರಮದಿಂದ ಕುಗ್ರಾಮ ಆಗಿದ್ದ ಗ್ರಾಮ ಈಗ ಆದರ್ಶ ಗ್ರಾಮ ಆಗುತ್ತಿದೆ. ಇದು ರಾಜ್ಯಕ್ಕೆ ವ್ಯಾಪಿಸಬೇಕು. ವಿಶ್ವಾಸ, ನಂಬಿಕೆಗೆ ಎಲ್ಲರೂ ಬದ್ಧರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಮಹಾಭಾರತದ ಪರಿಕಲ್ಪನೆ: ರಾಜನಿಲ್ಲದ ರಾಜ್ಯ, ದಂಡನೆ ಇಲ್ಲದೆ ದಂಡ ಸಂಹಿತೆ, ನಂಬಿಕೆ, ವಿಶ್ವಾಸ, ಪ್ರೀತಿಯೇ ಕಾನೂನು, ಸಹಮತದ ಆಡಳಿತ ನಡೆಸುವ ಕುರಿತು ಧರ್ಮರಾಜನಿಗೆ ಭೀಷ್ಮ ಹೇಳಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಕಾನೂನು ಇಲ್ಲದೆ ಸಮಾಜ ಪರಿವರ್ತನೆ ಮಾಡಬೇಕು ಎಂಬ ಪರಿಕಲ್ಪನೆ ಮಹಾಭಾರತ ಕಾಲದಲ್ಲಿತ್ತು. ಇಂತಹ ಪರಿಕಲ್ಪನೆಯನ್ನು ಮಂಡೆಕೋಲಿನಲ್ಲಿ ಅನುಷ್ಠಾನಕ್ಕೆ ತಂದಿದ್ದು, ಈ ಗ್ರಾಮದಲ್ಲಿ ಹುಟ್ಟಿದ ತಾನು ಪುಣ್ಯ ಮಾಡಿರಬೇಕು ಎಂದರು.
 ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಕಾನೂನು ಅರಿವು ಮೂಡಿಸುವುದು, ನೆರೆ ಹೊರೆಯ ಸಂಬಂಧ ಉತ್ತಮಪಡಿಸುವುದು, ದುಶ್ಚಟ ದೂರ ಮಾಡಿ, ಸರಳ ಜೀವನದೊಂದಿಗೆ ಒಗ್ಗಟ್ಟಿನ ಮಂತ್ರ ಜಪಿಸಿದರೆ ಆಂದೋಲನ ಯಶಸ್ವಿ ಆಗತ್ತದೆ ಎಂದರು.
ಟೀಕೆಗಳು ಪರಿವರ್ತನೆಗೆ ದಾರಿ: ಟೀಕೆ-ಟಿಪ್ಪಣಿ ಕೇಳುವ ದಿನಗಳು ಬರಬಹುದು. ಸಲಹೆಗಳೊಂದಿಗೆ ಅದನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಬೇಕು. ಟೀಕೆಗಳನ್ನು ಪರಿವರ್ತನೆಗೆ ದಾರಿ ದೀಪ ಎಂದು ತಿಳಿದುಕೊಳ್ಳುವವ ಯಶಸ್ವಿ ಆಡಳಿತಗಾರ ಆಗುತ್ತಾನೆ ಎಂದು ಸದಾನಂದ ಗೌಡ ಕಿವಿಮಾತು ಹೇಳಿದರು. ಜಿ.ಪಂ. ಉಪಾಧ್ಯಕ್ಷ ರಿತೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಕರಪತ್ರ ಬಿಡುಗಡೆ ಮಾಡಿದರು. ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ತಾ.ಪಂ. ಸದಸ್ಯೆ ಮಮತಾ ಬೊಳುಗಲ್ಲು, ಕಾರ್ಯ ನಿರ್ವಹಣಾಧಿಕಾರಿ ಬಿ.ವಿ. ಮಲ್ಲೇಶಪ್ಪ ಅತಿಥಿಗಳಾಗಿದ್ದರು. ಸಮಿತಿ ಗೌರವಾಧ್ಯಕ್ಷ ವಿಷ್ಣುಮೂರ್ತಿ ಹೆಬ್ಬಾರ್, ಕಾರ್ಯಾಧ್ಯಕ್ಷ ಮಹಮ್ಮದ್ ಕುಂಞ ಶಾಲೆಕ್ಕಾರ್, ಸಂಯೋಜಕ ಶಿವಪ್ರಸಾದ್ ಉಗ್ರಾಣಿಮನೆ, ಕೋಶಾಧಿಕಾರಿ ರಾಮಕೃಷ್ಣ ಮಾಸ್ತರ್, ಶಾಲೆ ಮುಖ್ಯ ಶಿಕ್ಷಕಿ ಪದ್ಮಾ ರಂಗನಾಥ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮನಮೋಹನ ಬೊಳುಗಲ್ಲು, ಕಾರ್ಯಕ್ರಮ ಸಂಯೋಜಕ ಡಾ.ಸುಂದರ್ ಕೇನಾಜೆ ಇದ್ದರು.
 ಪಂಚಾಯಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯರಾಜ್ ಕುಕ್ಕೇಟಿ ಸ್ವಾಗತಿಸಿದರು. ಸದಾನಂದ ಮಾವಂಜಿ ವಂದಿಸಿದರು. ಅಚ್ಚುತ ಅಟ್ಲೂರು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement