ಸೈಬರ್ನಲ್ಲಿ ವಿದ್ಯಾರ್ಥಿನಿಗೆ ಕೀಟಲೆ; ಸಿಬ್ಬಂದಿ ಬಂಧನ
ಮಂಗಳೂರು: ದೇರಳಕಟ್ಟೆಯಲ್ಲಿ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ಗಿರಿ ಘಟನೆ ಮಾಸುವ ಮುನ್ನವೇ ಇನ್ನೊಂದು ಶಾಂತಿಕದಡುವ ಘಟನೆ ಮಂಗಳೂರಿನಲ್ಲಿ ಶನಿವಾರ ಸಂಭವಿಸಿದೆ.
ಮಾರ್ನಮಿಕಟ್ಟೆ ಬಳಿ ಸೈಬರ್ ಸೆಂಟರ್ ಸಿಬ್ಬಂದಿಯೇ ಕಾಲೇಜು ವಿದ್ಯಾರ್ಥಿನಿಗೆ ಕೀಟಲೆ ಮಾಡಿ ಪೊಲೀಸರ ವಶವಾದ ಪ್ರಕರಣ ನಡೆದಿದೆ.
ಬಂಟ್ಸ್ ಹಾಸ್ಟೇಲ್ ಸಮೀಪದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮಧ್ಯಾಹ್ನ ಮಾರ್ನಮಿಕಟ್ಟೆ ಸೈಬರ್ ಸೆಂಟರ್ಗೆ ಹೋಗಿದ್ದಳು. ಸೈಬರ್ನಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿದ ಸಿಬ್ಬಂದಿ ಅಬು ಶಾಲಿ ಎಂಬಾತ, ಆಕೆ ಜತೆ ಕೆಟ್ಟದಾಗಿ ಮಾತನಾಡಿ ಅಶ್ಲೀಲ ವರ್ತಿಸಿದ್ದ. ಅಲ್ಲದೆ ಆಕೆಗೆ ಆಮಿಷವನ್ನೂ ಒಡ್ಡಿದ್ದ. ಇದನ್ನು ಪ್ರತಿಭಟಿಸಿದ ಆಕೆ ಜೆಪ್ಪುವಿನ ತನ್ನ ಮನೆಗೆ ಬಂದು ಹೆತ್ತವರಲ್ಲಿ ದೂರಿದ್ದಾಳೆ.
ಹೆತ್ತವರು ಕೂಡಲೇ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಶಾಲಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಮೂಲ್ಕಿ: ಬಪ್ಪನಾಡು ದೇವಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಂಭವಿ ನದಿಯ ಸೇತುವೆಯಡಿ ಅಪರಿಚಿತ ವ್ಯಕ್ತಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ನಿತ್ಯಾನಂದ ಎಂಬವರು ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ಮೃತದೇಹದ ಮೈ ಮೇಲೆ ಪ್ಯಾಂಟ್ ಹಾಗೂ ಶರ್ಟ್ ಇದ್ದು, ಶವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.