ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಡಕೆ ನಿಷೇಧ ವಿರೋಧಿಸಿ ಸಮಾವೇಶ

Vishwanath S
Updated On : 30 Dec 2013, 12:38 pm

ಪುತ್ತೂರು: ಅಡಕೆ ನಿಷೇಧದ ಕುರಿತ ವಿಚಾರ ಇದೀಗ ಸುಪ್ರಿಂ ಕೋರ್ಟ್‌ನ ಕೈಯಲ್ಲಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ದ್ವಂದ್ವ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಜ್ಯದ 28 ಸಂಸದರಾದಿಯಾಗಿ ಯಾವುದೇ ಜನಪ್ರತಿನಿಧಿಗಳಿಗೆ ಅಡಕೆ ನಿಷೇಧಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿಯಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
 ಅವರು ಶನಿವಾರ ಪುತ್ತೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಅಡಕೆ ನಿಷೇಧ ವಿರೋಧಿಸಿ ನಡೆದ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.  ಅಡಕೆ ನಿಷೇಧವಾದಲ್ಲಿ ಜನತೆ ಬೀದಿಗಿಳಿದು ಹೋರಾಟ ನಡೆಸುವುದು ನಿಶ್ಚಿತ ಎಂದ ಅವರು ಹಾಗಾದಲ್ಲಿ ಸರ್ಕಾರ ಪತನಗೊಳ್ಳುವುದು ಖಚಿತ. ಅಲ್ಲದೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಕರ್ನಾಟಕದಲ್ಲಿ ಓಡಾಡುವುದು ಕಷ್ಟವಾಗಬಹುದು. ಅದಕ್ಕಿಂತ ಮೊದಲು ನಿಷೇಧವನ್ನು ತಡೆಯುವ ಕೆಲಸವಾಗಲಿ ಎಂದು ಆಗ್ರಹಿಸಿದರು.
 ಕಿಸಾನ್ ಕೆಪಿಸಿಸಿ ಉಪಾಧ್ಯಕ್ಷ ಸಚಿನ್ ಮಿಗಾ,  ರೈತಪರ ಹೋರಾಟಗಾರ ನ್ಯಾಯವಾದಿ ಎಸ್. ಪಿ ಚಂಗಪ್ಪ ಮಾತನಾಡಿದರು. ರೈತ ಸಂಘದ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ರೈತರ ಹಿತರಕ್ಷಣೆಗೆ ಹುಟ್ಟಿಕೊಂಡ ಕ್ಯಾಂಪ್ಕೋ ಸಂಸ್ಥೆ ಇಂದು ಕಂಪನಿಯಾಗಿ ಬೆಳೆದಿದೆ. ಇದೀಗ ರೈತರ ಪರ ಎಂದು ವಕಾಲತ್ತು ಮಾಡುವ ಸಂಸ್ಥೆಯ ಎಲ್ಲ ವಿಚಾರಗಳು ನಾಟಕವಾಗಿದೆ ಎಂದರು.
 ರೈತ ಸಂಘದ ಮುಖಂಡರಾದ ಮುರುವ ಮಹಾಬಲ ಭಟ್, ಎಂ. ಜಿ ಸತ್ಯನಾರಾಯಣ , ಮಹೇಶ್ ಹಾಸನ, ಶಿವಣ್ಣ ಗೌಡ ಇಡ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಡಿಲ ಈಶ್ವರ ಭಟ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement