ಪತ್ನಿ, ಮಕ್ಕಳ ಸಾವಿಗೆ ಪ್ರಚೋದನೆ; ಆರೋಪಿಗೆ ನ್ಯಾಯಾಂಗ ಬಂಧನ
ಬಂಟ್ವಾಳ: ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಸಾವಿನ ಆರೋಪದಲ್ಲಿ ಬಂಧಿತನಾಗಿರುವ ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮ ನಿವಾಸಿ ಅನ್ವರ್ ಸಾದಿಕ್( 36) ಎಂಬಾತನನ್ನು ಬಿ.ಸಿ. ರೋಡ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು ಡಿ.18ರಂದು ಊರಿಗೆ ಬರುವ ಖಚಿತ ಮಾಹಿತಿಯಂತೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದರು. ಡಿ.23ರಂದು ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ಬಳಿಕ ಕಾನೂನು ಕ್ರಮ ಕೈಗೊಂಡು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಿದ್ದರು. ಆರೋಪಿಯ ಪತ್ನಿ ಮಮ್ತಾಜ್(28) ಮಕ್ಕಳಾದ ಫಾತಿಮಾ ನೈಸಾನ್(8) ಮತ್ತು ಖತಿಜಾ ನೈಫಾ(5) ಜೂ. 19ರಂದು ಮಂಗಳೂರು ತಾಲೂಕು ಕಲ್ಲಾಪು ಬಳಿ ರೈಲ್ವೆ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆಯ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಸಂದರ್ಭ ಮೃತಳ ತಂದೆ ನೀಡಿದ ದೂರಿನಲ್ಲಿ ಆರೋಪಿಯು ನೀಡುತ್ತಿದ್ದ ಮಾನಸಿಕ ಹಿಂಸೆ, ನೀವೆಲ್ಲಿಯಾದರೂ ಹೋಗಿ ಸಾಯಿರಿ ಎಂದು ಪ್ರಚೋದಿಸಿ ನೀಡಿದ ಕಿರುಕುಳ ಸಾವಿಗೆ ಕಾರಣ ಎಂದಿದ್ದರು. ಆರೋಪಿಯು ವಿದೇಶದಲ್ಲಿ ಇದ್ದರಿಂದ ಮಾಹಿತಿಯನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ನೀಡಲಾಗಿತ್ತು. ತನ್ನ ಆಗಮನವನ್ನು ಮರೆಮಾಚುವ ಉದ್ದೇಶದಿಂದ ದೆಹಲಿಯಲ್ಲಿ ಇಳಿದರೂ ಕಾನೂನಿನ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ. ಆರೋಪಿಯನ್ನು ಡಿ.27ರಂದು ಬಂಟ್ವಾಳ ನಗರ ಪೊಲೀಸರಿಗೆ ಹಸ್ತಾಂತರಿಸಿದ್ದು ಪ್ರಾಥಮಿಕ ತನಿಖೆಯ ಬಳಿಕ ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು.
ತಾಂತ್ರಿಕ ದೋಷ: ಕಾರು ಭಸ್ಮ
ಬಂಟ್ವಾಳ: ಮಾರುತಿ 800 ಕಾರು ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಭಾನುವಾರ ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಯಲ್ಲಿ ನಡೆದಿದೆ. ಶರೀಫ್ ಎಂಬವರು ಫರಂಗಿಪೇಟೆಯಿಂದ ಬಿ.ಸಿ.ರೋಡ್‌ಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಘಟನೆ ನಡೆದಿದೆ. ತುಂಬೆಯ ಬಿ.ಎ. ಕಾಲೇಜು ಬಳಿ ಕಾರು ತಲುಪುತ್ತಿದ್ದಂತೆ ವೈರ್ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಕಾರನ್ನು ತಕ್ಷಣ ನಿಲ್ಲಿಸಿ ಬಾನೆಟ್ ತೆರೆಯುತ್ತಿದ್ದಂತೆ ಒಮ್ಮೆಗೇ ಬೆಂಕಿ ಹತ್ತಿಕೊಂಡು ಇಡೀ ಕಾರಿಗೆ ಬೆಂಕಿ ವ್ಯಾಪಿಸಿತು. ತಕ್ಷಣ ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಲು ಶ್ರಮಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಆದರೆ ಅದಾಗಲೇ ಕಾರು ಭಾಗಶಃ ಕರಟಿ ಹೋಗಿತ್ತು. ಫರಂಗಿಪೇಟೆಯ ಶಮೀರ್ ಎಂಬವರಿಗೆ ಈ ಕಾರು ಸೇರಿದೆ ಎನ್ನಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ನಗರ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಅಪ್ರಾಪ್ತ ಬಾಲಕಿ ಅತ್ಯಾಚಾರ: ಆರೋಪಿ ಸೆರೆ
ಸುಳ್ಯ: ಅಪ್ರಾಪ್ತ ಬಾಲಕಿಯ ಮಾನಭಂಗ ಮಾಡಿದ ವ್ಯಕ್ತಿಯೊಬ್ಬನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಪೈಲಾರು ಸಮೀಪದ ಜಯರಾಮ ರೈ ಬಂಧಿತ ಆರೋಪಿ. ಮಾನಭಂಗಕ್ಕೆ ಸಹಕರಿಸಿದ ಆರೋಪದಲ್ಲಿ ಶೇಣಿ ಸಮೀಪದ ಮಾಲಿನಿ ಎಂಬಾಕೆ ಮೇಲೂ ಪ್ರಕರಣ ದಾಖಲಿಸಲಾಗಿದೆ. ಮಾಲಿನಿಯ ಮನೆಗೆ ಬಂದ ಜಯರಾಮ ರೈ ಅದೇ ಪರಿಸರ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಎರಡು ದಿನಗಳ ಬಳಿಕ ಹುಡುಗಿ ಈ ವಿಚಾರ ಬಾಯಿ ಬಿಟ್ಟಾಗ ಹೆತ್ತವರು ಪೊಲೀಸರಿ ದೂರು ನೀಡಿದ್ದಾರೆ.
ಭದ್ರತಾ ಸಿಬ್ಬಂದಿ ಆತ್ಮಹತ್ಯೆ
ಮಂಗಳೂರು: ಬಳ್ಳಾಲ್‌ಬಾಗ್ ನಿವಾಸಿ, ಭದ್ರತಾ ಸಿಬ್ಬಂದಿ ಶೇಖರ್(65) ಭಾನುವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮನೆಯಲ್ಲಿ ಬೆಳಗ್ಗೆ ವಿಷ ಸೇವಿಸಿ ನರಳಾಡುತ್ತಿದ್ದ ಸಂದರ್ಭ ಮಗ ಕೂಡಲೇ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಪ್ರಕರಣ ಬರ್ಕೆ ಠಾಣೆಯಲ್ಲಿ ದಾಖಲಾಗಿರುತ್ತದೆ.
ಶೇಖರ್ ಅವರು ಮೂಲತಃ ಮಡಿಕೇರಿಯವರಾಗಿದ್ದು, ಮಂಗಳೂರಿನಲ್ಲಿ ಸಣ್ಣ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದರು. ನಂತರ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಐವರು ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿ; ಚಾಲಕ ಗಂಭೀರ
ಮೂಲ್ಕಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಬಳಿ ಭಾನುವಾರ ಸಂಜೆ ಪಕ್ಷಿಕೆರೆಯಿಂದ ಹಳೆಯಂಗಡಿಗೆ ಹೋಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡು ಚಾಲಕ ಲಕ್ಷ್ಮಣ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ಅಪಾಯದಿಂದ ಪಾರಾಗಿದ್ದು ವಿದ್ಯುತ್ ಕಂಬವು ತುಂಡಾಗಿ ಬಿದ್ದು ಪರಿಸರದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಕಾರ್ಕಳ: ಕುಕ್ಕುಂದೂರು ಗ್ರಾಮದ ಇಟ್ಟಿಕಟ್ಟ ಹೊಳೆಗೆ ಈಜಲು ಹೋದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರು ಉದಯ ಶೆಟ್ಟಿ (45), ಅವರು ತನ್ನ ಸಂಬಂಧಿಕರ ಜತೆ ಇಟ್ಟಿಕಟ್ಟ ಹೊಳೆಗೆ ಈಜಲು ಹೋಗಿದ್ದು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗ ಉತ್ಸವ್ ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ದುರಂತ: ಸೈಕಲ್ ಸವಾರ ಮೃತ
ಕುಂದಾಪುರ: ಮೆಟಡೋರ್ ವಾಹನ- ಸೈಕಲ್ ಡಿಕ್ಕಿಯಾಗಿ ಸೈಕಲ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಹಂಗಳೂರಿನ ಮಸೀದಿ ಹತ್ತಿರ ಶನಿವಾರ ನಡೆದಿದೆ. ಮೃತರು ರೋಬರ್ಟ್ ಡಿಸೋಜ. ಆರೋಪಿ ಅಬ್ದುಲ್ ರೆಹಮಾನ್ ಎಂಬವರು ಮೆಟಡೋರ್ ವಾಹನವನ್ನು ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರೋಬರ್ಟ್ ಡಿಸೋಜ ರಸ್ತೆಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಂಪೊ- ಬೈಕ್ ಡಿಕ್ಕಿ: ಇಬ್ಬರಿಗೆ ಗಾಯ
ಕುಂದಾಪುರ: ಟೆಂಪೋ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಸಹಸವಾರ ಗಾಯಗೊಂಡ ಘಟನೆ ಇಲ್ಲಿನ ಕೋಟೇಶ್ವರ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಬಳಿಯ ರಥಬೀದಿ ರಸ್ತೆಯಲ್ಲಿ ಶನಿವಾರ ನಡೆದಿದೆ. ಗಾಯಗೊಂಡವರನ್ನು ನಾಗರಾಜ ಹಾಗೂ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಟೆಂಪೊ ಚಾಲಕ ಗೋವಿಂದ ಪೂಜಾರಿ ಟೆಂಪೋವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಬಂದಿರುವುದೇ ಅಪಘಾತಕ್ಕೆ ಕಾರಣ ಎಂಬುದಾಗಿ ಪ್ರದೀಪ ಎಂಬವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.