ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪೆಟ್ರೋ ಕೆಮಿಕಲ್ಸ್ ಉದ್ಯಮಕ್ಕೆ ರು. 2.50 ಲಕ್ಷ ಕೋಟಿ ಬಂಡವಾಳ ನಿರೀಕ್ಷೆ: ಸಚಿವ ಮೊಯ್ಲಿ

Vishwanath S
Updated On : 30 Dec 2013, 12:37 pm

ಮಂಗಳೂರು: ಇನ್ನು ಒಂದು ವರ್ಷದಲ್ಲಿ ಮಂಗಳೂರಿನ ಪೆಟ್ರೋ ಕೆಮಿಕಲ್ಸ್ ಉದ್ಯಮಕ್ಕೆ ರು. 2.50 ಲಕ್ಷಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪರಿಸರ ಮತ್ತು ಅರಣ್ಯ ಸಚಿವ ಡಾ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಭಾನುವಾರ ನವ ಮಂಗಳೂರು ಬಂದರು ಮಂಡಳಿಯಲ್ಲಿ ಪಿಒಎಲ್ ಬರ್ತ್ ನಂ.13 ಲೋಕಾರ್ಪಣೆ ಹಾಗೂ ಕಂಟೈನರ್ ಮತ್ತು ಬೃಹತ್ ಸರಕು ನಿರ್ವಹಣೆಗೆ ಬರ್ತ್ ನಂ.18ಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರು ಪೆಟ್ರೋ ಕೆಮಿಕಲ್ಸ್ ಕಾಂಪ್ಲೆಕ್ಸ್‌ನಿಂದ 5ರಿಂದ 6 ಲಕ್ಷ ಜನರಿಗೆ ಪರೋಕ್ಷವಾಗಿ ಉದ್ಯೋಗಕ್ಕೆ ನೆರವಾಗಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಮಂಗಳೂರು ಬಂದರು ದೇಶದ ಎರಡನೇ ಗೇಟ್‌ವೇ ಆಗಲಿದೆ. ಎನ್‌ಎಂಪಿಟಿ ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯವೂ ವೃದ್ಧಿಸಿದ್ದು, ವಾರ್ಷಿಕ 83 ಮಿಲಿಯನ್ ಟನ್‌ಗೆ ಏರಿಕೆಯಾಗಲಿದೆ. ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನವಲ್ಲದೆ, ಕಾಫಿಯನ್ನೂ ರಫ್ತು ಮಾಡಲಾಗುತ್ತದೆ. ಇನ್ನಷ್ಟು ಸರಕು ನಿರ್ವಹಣೆಗೆ ಮುಕ್ತ ಮನಸ್ಸು ಹೊಂದಬೇಕಿದ್ದು, ಪ್ರಗತಿ ಸಲುವಾಗಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು.
ಎನ್‌ಎಂಪಿಟಿ ಅಧ್ಯಕ್ಷ ತಮಿಳ್‌ವಾಣನ್ ಪ್ರಾಸ್ತಾವಿಕದಲ್ಲಿ, ಉದ್ಘಾಟನೆಗೊಂಡ ಬರ್ತ್ ನಂ.13ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ನಿರ್ವಹಿಸಲಾಗುವುದು. ರು. 79.17 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ವಾರ್ಷಿಕ 7.8 ಮಿಲಿಯನ್ ಟನ್ ಕಾರ್ಗೊ ನಿರ್ವಹಿಸಲಿದೆ. ಬರ್ತ್ ನಂ.18 ದೊಡ್ಡ ಕಾರ್ಗೋ ನಿರ್ವಹಣೆಗೆ ಬಳಕೆಯಾಗಲಿದ್ದು, ರು. 93.62 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಮುಂದಿನ 20 ತಿಂಗಳಲ್ಲಿ ಬರ್ತ್ ಸಿದ್ಧಗೊಳ್ಳಲಿದೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ಬಂದರು ಇಲಾಖೆ ಕಾರ್ಯದರ್ಶಿ ಚೆಚೋರಿಯಾ, ಜಿಲ್ಲಾಧಿಕಾರಿ ಇಬ್ರಾಹಿಂ, ಎನ್‌ಎಂಪಿಟಿ ಉಪಾಧ್ಯಕ್ಷ ಟಿ.ಎಸ್.ಎನ್.ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement