ಭಟ್ಕಳ್‌ನಿಂದ ಮಾಹಿತಿ ಕಲೆಹಾಕಿದ ಎಟಿಎಸ್
ಮಂಗಳೂರು: ಇಂಡಿಯನ್ ಮುಜಾಹಿದ್ದೀನ್ ಸಹ ಸಂಸ್ಥಾಪಕ ಹಾಗೂ ವಿಧ್ವಂಸಕ ಕೃತ್ಯಗಳ ಮಾಸ್ಟರ್ ಮೈಂಡ್ ಯಾಸಿನ್ ಭಟ್ಕಳ್‌ನ್ನು ಮಂಗಳೂರಿಗೆ ಕರೆತಂದಿರುವ ರಾಷ್ಟ್ರೀಯ ತನಿಖಾ ದಳ (ಎಟಿಎಸ್)ಆತನಿಂದ ಮಹತ್ವದ ಮಾಹಿತಿಯನ್ನು ಕಲೆಹಾಕಿದೆ.
ಬಾಂಬ್ ಫ್ಯಾಕ್ಟರಿಗೆ ಕರಾವಳಿಯಿಂದ ಕಚ್ಚಾ ಸಾಮಗ್ರಿ ಪೂರೈಸುತ್ತಿದ್ದ ಯಾಸಿನ್‌ನ್ನು ಹೆಚ್ಚಿನ ತನಿಖೆಗಾಗಿ ಎಟಿಎಸ್ ಅಧಿಕಾರಿಗಳು ಶುಕ್ರವಾರ ಮಂಗಳೂರಿಗೆ ವಿಮಾನ ಮೂಲಕ ಕರೆತಂದಿದ್ದರು. ಶನಿವಾರ ಚಿಕ್ಕಮಗಳೂರಿನಲ್ಲಿ ಹಿಂದೆ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದ ಕೊಪ್ಪ ಪರಿಸರಕ್ಕೆ ಯಾಸಿನ್‌ನ್ನು ಕರೆದೊಯ್ದು ಮಾಹಿತಿ ಸಂಗ್ರಹಿಸಿದ್ದರು.
ಅಲ್ಲಿಂದ ಸಂಜೆ ಉಡುಪಿಗೆ ಕರೆದೊಯ್ದಿದ್ದರು. ಹಿಂದೆ ಉಡುಪಿಯಲ್ಲಿ ಬಾಂಬ್ ತಯಾರಿ ಪರಿಕರಗಳನ್ನು ಖರೀದಿಸಿದ್ದನು. ಅಂಥ ಅಂಗಡಿಗಳಿಗೆ ಭೇಟಿ ನೀಡಿ ತಂಡ ಮಾಹಿತಿ ಕಲೆಹಾಕಿತು. ಅಲ್ಲದೆ ಮಂಗಳೂರಿನ ಅತ್ತಾವರ, ಉಳ್ಳಾಲಗಳಲ್ಲೂ ಮಾಹಿತಿ ಪಡೆಯಿತು.
ಭಾನುವಾರ ಬೆಳಗ್ಗೆ ಯಾಸಿನ್‌ನ್ನು ವಿಮಾನ ಮೂಲಕ ಮುಂಬೈಗೆ ಕರೆದೊಯ್ಯಲಾಗಿದೆ. ಎಟಿಎಸ್ ವಿಚಾರಣೆ ವೇಳೆ, ದೇಶದ ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನವನ್ನು ಅಪಹರಿಸುವ ಸಂಚು ರೂಪಿಸುತ್ತಿದ್ದುದನ್ನು ಯಾಸಿನ್ ಬಹಿರಂಗಪಡಿಸಿದ್ದ ಎನ್ನಲಾಗಿದೆ.
ಈ ವಿಚಾರ ಕೇಂದ್ರ ಗುಪ್ತಚರ ಇಲಾಖೆ ಗಮನಕ್ಕೂ ಬಂದಿದ್ದು, ಬಳಿಕ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್‌ಗೆ ಸೂಚನೆ ನೀಡಲಾಗಿದೆ.