ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೊಬೈಲ್ ಟವರ್ ಗೊಂದಲ: ಜಾಗ ಮಾಲೀಕರಿಗೆ ನೋಟಿಸ್ ನೀಡಲು ನಿರ್ಣಯ

Vishwanath S
Updated On : 30 Dec 2013, 12:37 pm

ಉಪ್ಪಿನಂಗಡಿ: ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯ್ತಿ ಆಡಳಿತದ ಗಮನಕ್ಕೆ ಬಾರದೆ ಅಳವಡಿಸಲಾದ ಮೂರು ಮೊಬೈಲ್ ಟವರ್‌ಗಳ ಬಗ್ಗೆ ಸಮರ್ಪಕ ಮಾಹಿತಿಯನ್ನು ಪಂಚಾಯಿತಿ ಆಡಳಿತಕ್ಕೆ ನೀಡುವಂತೆ ಕೋರಿ ಜಾಗದ ಮಾಲೀಕರಿಗೆ ನೋಟಿಸ್ ನೀಡಲು ಹಿರೇಬಂಡಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಶನಿವಾರ ಹಿರೇಬಂಡಾಡಿ ಗ್ರಾ.ಪಂ. ಸಭಾಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ದಾಸರಮೂಲೆ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ಮೊಬೈಲ್ ಟವರ್‌ಗಳ ಕುರಿತಂತೆ ಪಿಡಿಒ ರಾಜಣ್ಣ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಮಾತನಾಡಿದ ಸದಸ್ಯ ಸೇಸಪ್ಪ ನೆಕ್ಕಿಲು, ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ಬೇರೆ ಬೇರೆ ಕಂಪನಿಗಳ ಟವರ್‌ಗಳಿವೆ. ಇಲ್ಲಿನ ಟವರ್‌ಗಳ ವಿಚಾರ ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪಗೊಂಡಿದೆ. ಆದ್ದರಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಮೂರು ಮೊಬೈಲ್ ಟವರ್‌ಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ರಾಜಣ್ಣ, 2007-08ರಲ್ಲಿ ಮೊಬೈಲ್ ಟವರ್ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಉತ್ತರ ಬಂದಿಲ್ಲ. ರಾಜ್ಯದಲ್ಲಿನ ಮೊಬೈಲ್ ಟವರ್‌ಗಳಿಗೆ ಸರ್ಕಾರವೇ ರು. 12 ಸಾವಿರ ಬಾಡಿಗೆ ನಿಗದಿಗೊಳಿಸಿದೆ. ಆದರೆ ಈ ವಿಚಾರ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಗೊಂದಲಗಳಿರುವುದರಿಂದ ಟವರ್‌ಗಳ ಬಾಡಿಗೆ ವಿಚಾರದಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದಲೂ ಸ್ಪಷ್ಟೀಕರಣ ಕೋರಲಾಗಿದೆ ಎಂದರು.
ಮನೆ ನಿವೇಶನ ಗೊಂದಲ: ಗ್ರಾಮದಲ್ಲಿ ಮನೆ ನಿವೇಶನ ಹಂಚಿಕೆ ವಿಚಾರದಲ್ಲಿ ಸದಸ್ಯರಿಬ್ಬರು ವಾಗ್ವಾದ ನಡೆಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪಿಡಿಒ ರಾಜಣ್ಣ, 2013-14ರಲ್ಲಿ ಬಸವ ವಸತಿಯಲ್ಲಿ 20 ಹಾಗೂ ಇಂದಿರಾ ಆವಾಸ್‌ನಲ್ಲಿ 13 ಮನೆ ಮಂಜೂರುಗೊಂಡಿದೆ. ಇನ್ನೂ ಮನೆ ನಿವೇಶನದ ಅವಶ್ಯಕತೆ ಇದ್ದಲ್ಲಿ ಅವರ ಹೆಸರು ಗ್ರಾ.ಪಂ.ಗೆ ಕಳಿಸಿಕೊಡುವಂತೆ ಹೇಳಿದರು.
ಮಾತಿನ ಚಕಮಕಿ: ಹರಿನಗರ ಭಜನಾ ಮಂದಿರ ಬಳಿ ರಸ್ತೆ ಬದಿ ಕಾಂಕ್ರಿಟ್ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಎಪ್ರೂವಲ್ ಆಗಿದೆ. ಆದರೆ ಕೆಲಸ ಅರ್ಧದಲ್ಲಿ ನಿಂತಿದೆ. ಗುತ್ತಿಗೆದಾರರು ಕಾಮಗಾರಿ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಸದಸ್ಯ ಹಮ್ಮಬ್ಬ ಶೌಕತ್ ಆಲಿ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಗೀತಾ ದಾಸರಮೂಲೆ, ಈ ಬಗ್ಗೆ ಆ ವಾರ್ಡ್ ಸದಸ್ಯರು ಪ್ರಶ್ನಿಸಿಲಿ ಎಂದರು. ಇದನ್ನು ಆಕ್ಷೇಪಿಸಿದ ಶೌಕತ್ ಆಲಿ, ನಮಗೂ ಆ ಭಾಗದಲ್ಲಿ ಮತದಾರರು ಇದ್ದಾರೆ. ನಾವು ಗ್ರಾಮದ ಸಮಸ್ಯೆ ಬಗ್ಗೆ ಮಾತನಾಡುತ್ತೇವೆ ಎಂದು ಏರುಧ್ವನಿಯಲ್ಲಿ ಹೇಳಿದರು. ಈ ವಿಚಾರದಲ್ಲೂ ಸದಸ್ಯ ಶೇಷಪ್ಪ ನೆಕ್ಕಿಲು ಮತ್ತು ಶೌಕತ್ ಅಲಿ ನಡುವೆ ಮಾತಿನ ಚಕಮಕಿ ನಡೆಯಿತು.
ಸಭೆಯಲ್ಲಿ ಪಂಚಾಯ್ತಿಯ 13 ಸದಸ್ಯರನ್ನು ಸೇರಿಸಿಕೊಂಡು ಸ್ಥಾಯಿ ಸಮಿತಿ ಪುನಾರಚನೆಗೆ ಅಗ್ರಹ ಕೇಳಿ ಬಂದು, ಎಲ್ಲ 13 ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಸ್ಥಾಯಿ ಸಮಿತಿ ಪುನಾರಚನೆಯನ್ನು ಮುಂದಿನ ಸಭೆಯಲ್ಲಿ ಮಂಡಿಸುವುದಾಗಿ ಪಿಡಿಒ ಭರವಸೆ ನೀಡಿದರು.
ಸದಸ್ಯರುಗಳಾದ ಶಿವಚಂದ್ರ ನಿಡ್ಡೆಂಕಿ, ಜನಾರ್ದನ ಅನಂತಿಮಾರು, ಮಾಲತಿ ಹರಿನಾರಾಯಣ, ವೆಂಕಮ್ಮ, ವೇದಾವತಿ, ಸವಿತಾ ಹರೀಶ್, ಸುಮಿತ್ರಾ ಇದ್ದರು. ಕಾರ್ಯದರ್ಶಿ ಭವಾನಿ ವರದಿ, ಜಮಾ ಖರ್ಚಿನ ವಿವರ ಮಂಡಿಸಿದರು. ಪಿಡಿಒ ರಾಜಣ್ಣ ಸರ್ಕಾರಿ ಸುತ್ತೋಲೆಗಳನ್ನು ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement