ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೃಷಿಕರ ಸಹಕಾರಿ ಸಂಘ 'ಮಾರಾಟ'!

Lingaraj Badiger
Updated On : 31 Dec 2013, 12:07 pm

ಮಂಗಳೂರು: ಇಬ್ಬರು ಮುಖ್ಯಮಂತ್ರಿಗಳು ಘೋಷಿಸಿದ ಪುನಶ್ಚೇತನ ಮೊತ್ತ ದಕ್ಕದೆ ದ.ಕ. ಕೃಷಿಕರ ಸಹಕಾರಿ ಮಾರಾಟ ಸಂಘ (ಎಸ್‌ಕೆಎಸಿಎಂಎಸ್) ಬಹುತೇಕ ಕೊನೆಯುಸಿರೆಳೆಯುತ್ತಿದೆ. ಈ ಸಂಘದ ಸ್ವಂತ ಆಸ್ತಿಯನ್ನೂ ಮಾರಾಟ ಮಾಡಿ ಅಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ.
ಸಹಕಾರಿ ಕ್ಷೇತ್ರಕ್ಕೆ ಭದ್ರಬುನಾದಿ ಹಾಕಿದ ಜಿಲ್ಲೆಯ ಪುರಾತನ ಸಹಕಾರಿ ಸಂಘವೊಂದು ಸರ್ಕಾರ ಮತ್ತು ಸಹಕಾರಿಗಳ ನೆರವಿನಹಸ್ತ ಸಿಗದೆ ಪತನಗೊಳ್ಳುವ ದುರಂತ ಅಧ್ಯಾಯ ತೆರೆಯುತ್ತಿದೆ.
4 ದಶಕ ಹಿಂದೆ, ಮುಖ್ಯವಾಗಿ ಅಡಕೆ ಹಾಗೂ ಕೃಷಿ ಉತ್ಪನ್ನ ವಹಿವಾಟಿಗೆ ಪ್ರಾರಂಭವಾದ ಎಸ್‌ಕೆಎಸಿಎಂಎಸ್ ಪುತ್ತೂರು ಹಾಗೂ ಮಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿತ್ತು. ಇದು ಬಿಡ್ ಮೂಲಕ ಅಡಕೆ ವಹಿವಾಟು ನಡೆಸುತ್ತಿತ್ತು. ಅಡಕೆಯ ನೇರ ಮಾರಾಟ ವ್ಯವಸ್ಥೆ ಬಂದ ನಂತರ ಪ್ರಾಮುಖ್ಯತೆ ಕಳಕೊಂಡ ಈ ಸಂಸ್ಥೆ ಆಡಳಿತ ವೈಖರಿಯಲ್ಲೂ ಸೊರಗಿತು. ಕ್ರಮೇಣ ಸಿಬ್ಬಂದಿ ವೇತನಕ್ಕೂ ಗತಿ ಇಲ್ಲದೆ ಈಗ ಬಾಗಿಲು ಮುಚ್ಚುವ ಹಂತ ತಲಪಿತು.
ನೆರವು ಘೋಷಣೆಗೆ ಸೀಮಿತ: ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಹಕಾರಿಗಳ ಒತ್ತಾಸೆ ಮೇರೆಗೆ ಪುನಶ್ಚೇತನಕ್ಕೆ ರು. 12 ಕೋಟಿ ಘೋಷಿಸಿದರು. ಆ ಮೊತ್ತ ಮುಖ್ಯಕಾರ್ಯದರ್ಶಿ ಹಂತದಲ್ಲೇ ತಡೆಹಿಡಿಯಲ್ಪಟ್ಟಿತು. ನಂತರ ಜಿಲ್ಲೆಯವರೇ ಆದ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದರು. ಆಗಲೂ ಪುನಶ್ಚೇತನ ಹೆಸರಿನಲ್ಲಿ ರು. 5 ಕೋಟಿ ಪ್ರಕಟಿಸಿದರು. ಈ ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಜಂಟಿ ಖಾತೆಯಲ್ಲಿ ಇಡಲಾಗಿದೆ. ಹಣ ಬಿಡುಗಡೆಯಾಗಬೇಕಾದರೆ ಸರ್ಕಾರಕ್ಕೆ ಖಾತರಿ ನೀಡಬೇಕು. ಅದನ್ನು ನೀಡಲು ಎಸ್‌ಕೆಎಸಿಎಂಎಸ್‌ನಿಂದ ಸಾಧ್ಯವಾಗಿಲ್ಲ. ಹಾಗಾಗಿ ಸಾಲದ ನೆರವೂ ಕನಸಿನ ಗಂಟಾಗಿದೆ.
ಜಾಗವೇ ಮಾರಾಟವಾಯ್ತು: ಎಸ್‌ಕೆಎಸಿಎಂಎಸ್‌ಗೆ ಪುತ್ತೂರಲ್ಲಿ 62 ಸೆಂಟ್ಸ್, ಮಂಗಳೂರಿನಲ್ಲಿ 92 ಸೆಂಟ್ಸ್ ಸ್ವಂತ ಕಟ್ಟಡವುಳ್ಳ ಜಾಗವಿದೆ. ಮಂಗಳೂರಿನ ಜಾಗವನ್ನು ಮಾರಾಟ ಮಾಡಿದ್ದು, ರು. 8 ಕೋಟಿ ಮೊತ್ತಕ್ಕೆ ವಿಕ್ರಯಿಸಲಾಗಿದೆ. ಈ ಮೊತ್ತವನ್ನು ಸಾಲಕ್ಕೆ ಸಂದಾಯ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಇದು ನಿಯಮಬಾಹಿರವಾಗಿ ನಡೆದಿದೆ ಎಂಬ ಅಪಸ್ವರ ಎದ್ದಿದ್ದು, ಎಸ್‌ಕೆಎಸಿಎಂಎಸ್ ಉಳಿಸಿ ಹೋರಾಟ ಸಮಿತಿ ಹುಟ್ಟಿಕೊಂಡಿದೆ.
ಎಸ್‌ಕೆಎಸಿಎಂಎಸ್‌ನಲ್ಲಿ 60 ಸಾವಿರ ಸದಸ್ಯರಿದ್ದು, ರು. 8 ಕೋಟಿ ಠೇವಣಿ ಇದೆ. ವಸೂಲಿಗೆ ಬಾಕಿ ಇರುವುದು ರು. 14 ಕೋಟಿ. ರು. 9 ಕೋಟಿ ವಸೂಲಾಗದೆ ಡಿಕ್ರಿಯಾಗಿದೆ. ಪಿಗ್ಮಿಯಿಂದ ಸಂಗ್ರಹಿಸಿದ ಮೊತ್ತ ರು. 3 ಕೋಟಿ ಇದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ರು. 4.50 ಕೋಟಿ ಸಾಲ ಮರುಪಾವತಿಗೆ ಬಾಕಿ ಇದೆ. ಇತರೆ ಸಹಕಾರಿ ಸಂಘಕ್ಕೆ ರು. 2.20 ಕೋಟಿ ಸಾಲ ಪಾವತಿಸಬೇಕಾಗಿದೆ. ಯಾವುದಕ್ಕೂ ಹಣ ಇಲ್ಲದೆ ಸರ್ಕಾರದ ನೆರವೂ ಸಿಗದೆ ಈಗ ಅತಂತ್ರ ಸ್ಥಿತಿಯಲ್ಲಿದೆ.
ವೇತನಕ್ಕೂ ಹಣವಿಲ್ಲ: ಪುತ್ತೂರಿನಲ್ಲಿ ಕಚೇರಿ ತೆರೆದಿದ್ದರೂ ಗೊಬ್ಬರ ವಹಿವಾಟು ನಡೆಯುತ್ತಿಲ್ಲ. ಗೊಬ್ಬರ ಖರೀದಿಗೆ ಮುಂಗಡ ಹಣವಿಲ್ಲ, ಸಿಬ್ಬಂದಿ ವೇತನಕ್ಕೂ ಕತ್ತರಿ ಬಿದ್ದಿದೆ. ಇದರಿಂದ ಸಿಬ್ಬಂದಿಯನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಪಿಗ್ಮಿ ಸಂಗ್ರಹಿಸಿದರೂ ಮರುಪಾವತಿ ಸಾಧ್ಯವಾಗುತ್ತಿಲ್ಲ. ಠೇವಣಿ ಇಟ್ಟವರು ವಾಪಾಸ್ ಕೊಡುವಂತೆ ಕೇಳುತ್ತಿದ್ದರೂ ಸಂಘದಲ್ಲಿ ಹಣ ಇಲ್ಲ. ಪುತ್ತೂರು ಶಾಖೆಯನ್ನು ಕ್ಯಾಂಪ್ಕೋ ಜತೆ ವಿಲೀನಗೊಳಿಸುವ ಪ್ರಸ್ತಾಪ ಬಂದರೂ ಕೊನೆಗೆ ಅದು ಮುರಿದುಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement