ಧಿಕ್ಕಾರ ಕೂಗಿದ ಆಟೋ ಚಾಲಕಗೆ 'ಕೈ ಎತ್ತಿದ' ಸಚಿವ
ಮೂಲ್ಕಿ: ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಪ್ರತಿಭಟನಾಕಾರರ ಧಿಕ್ಕಾರದ ಘೋಷಣೆಯಿಂದ ಕೆರಳಿದ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಸೋಮವಾರ ನಡೆದಿದೆ.
ಘಟನೆಯಿಂದ ರಿಕ್ಷಾ ಚಾಲಕರು ಆಕ್ರೋಶಗೊಂಡಿದ್ದು, ಸಚಿವರು ನಿರ್ಗಮಿಸಿದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪೊಲೀಸರು ನಿಯಂತ್ರಿಸಿದರು.
ಪ್ರಕರಣ ಹಿನ್ನೆಲೆ: ಮೂಲ್ಕಿ ವಿಜಯ ಬ್ಯಾಂಕ್ ಎದುರು ಚರಂತಿಪೇಟೆ-ಕಾರ್ನಾಡು ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಇದರ ದುರಸ್ತಿಗೆ ಆಗ್ರಹಿಸಿ ಸೋಮವಾರ ಮೂಲ್ಕಿ ನಾಗರಿಕ ಸಮಿತಿ, ರಿಕ್ಷಾ, ಕಾರು ಚಾಲಕರ ಸಂಘ ಮತ್ತಿತರ ಸಂಘಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ, ರಸ್ತೆ ದುರಸ್ತಿ ಬಗ್ಗೆ ಸಚಿವ ಹಾಗೂ ಕ್ಷೇತ್ರದ ಶಾಸಕರು ತಮ್ಮ ಅನುದಾನದಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಮೂಲ್ಕಿಯಿಂದ ಕಾರ್ನಾಡುವರೆಗೆ 10 ದಿನದೊಳಗೆ ರಸ್ತೆ ಡಾಂಬರೀಕರಣ ಸಂಪೂರ್ಣಗೊಳಿಸುವುದಾಗಿ ಹೇಳಿಕೆ ನೀಡಿದ್ದು, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದರು.
ಮೂಲ್ಕಿಯ ವಿಜಯ ಬ್ಯಾಂಕ್ ಎದುರಿನಿಂದ ಕಿನ್ನಿಗೋಳಿ ರಸ್ತೆಯನ್ನು ಕಾರ್ನಾಡು ವರೆಗೆ ತಡೆಗೊಳಿಸಿ ಮೂಲ್ಕಿ ನಾಗರಿಕ ಸಮಿತಿಯ ಹರೀಶ್ ಪುತ್ರನ್ ಹಾಗೂ ಹರ್ಷರಾಜ್ ಶೆಟ್ಟಿ ನೇತೃತ್ವದಲ್ಲಿ ಕಾರ್ನಾಡು ಜಂಕ್ಷನ್ ವರೆಗೆ ಮೆರವಣಿಗೆ ನಡೆಸಿ ಬಳಿಕ ಕಾರ್ನಾಡಿನಲ್ಲಿ ಪ್ರತಿಭಟನೆ ನಡೆಸಿದರು.
ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಅಭಯಚಂದ್ರ ಜೈನ್ ನಂತರ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಬೇಕಾಗಿತ್ತು. ಆದರೆ, ಅವರ ಹಿಂಬಾಲಕರು ಸಚಿವರನ್ನು ಮೂಲ್ಕಿ ನಾಡಕಚೇರಿಗೆ ಕರೆದೊಯ್ದದ್ದು ಪ್ರತಿಭಟನಾಕಾರರನ್ನು ಕೆರಳಿಸಿದ್ದು, ಇದರಿಂದ ಮೂಲ್ಕಿ ನಾಡಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು.
ನಾಡಕಚೇರಿಯಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಜೈನ್, ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕವಾಗಿದ್ದು, ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ರಾಜಕೀಯ ಉದ್ದೇಶದಿಂದ ಪ್ರತಿಭಟನೆ ನಡೆಸುವುದು ಸರಿಯಲ್ಲ. ತನ್ನ ಶಾಸಕ ಅನುದಾನದಲ್ಲಿ ರು. 10 ಲಕ್ಷದಲ್ಲಿ ಮೂಲ್ಕಿಯಿಂದ ಕಾರ್ನಾಡುವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡಿದೆ. ತಾನು ಮೂಲ್ಕಿ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದು ಸಂಸದರು ತನ್ನ ಅನುದಾನದಲ್ಲಿ ಕಳೆದ 5 ವರ್ಷದಲ್ಲಿ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಪೈಸೆ ಕೂಡ ನೀಡಿಲ್ಲ ಎಂದು ಹೇಳಿದಾಗ ಪ್ರತಿಭಟನೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು 'ಅಭಯಚಂದ್ರ ಜೈನ್‌ಗೆ ಧಿಕ್ಕಾರ'ವೆಂದು ಕೂಗಿದರು.
ಹಲ್ಲೆಗೆ ಮುಂದಾದ ಸಚಿವ: ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಮತ್ತಿತರರು ತರಾಟೆಗೆ ತೆಗೆದುಕೊಂಡಾಗ ಮಾತಿಗೆ ಮಾತು ಬೆಳೆದು ವಾಕ್ಸಮರ ನಡೆಯುತ್ತಿದ್ದ ಸಂದರ್ಭದಲ್ಲಿ ಆಕ್ರೋಶಗೊಂಡಿದ್ದ ಸಚಿವರನ್ನು ಅವರ ಹಿಂಬಾಲಕರು ಕಾರಿನ ಮೂಲಕ ಕಳುಹಿಸಲು ಯತ್ನಿಸಿದ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು 'ಅಭಯಚಂದ್ರ ಜೈನ್‌ಗೆ ಜೈ' ಎಂದು ಕೂಗಿದರು. ಪ್ರತಿಭಟನೆಯಲ್ಲಿದ್ದ ರಿಕ್ಷಾ ಚಾಲಕ ಸೇರಿದಂತೆ ಹಲವಾರು ಮಂದಿ 'ಅಭಯಚಂದ್ರ ಜೈನ್‌ಗೆ ಧಿಕ್ಕಾರ' ಎಂದು ಕೂಗಿದಾಗ ಕಾರಿನಲ್ಲಿ ಕುಳಿತಿದ್ದ ಜೈನ್ ಆಕ್ರೋಶಗೊಂಡು ನೇರವಾಗಿ ಕಾರಿನಿಂದಿಳಿದು ರಿಕ್ಷಾ ಚಾಲಕ ಪ್ರಶಾಂತ್ ಬಳಿ ಬಂದು ತರಾಟೆಗೆ ತೆಗೆದುಕೊಂಡರು. ರಿಕ್ಷಾ ಚಾಲಕ ಪ್ರಶಾಂತ್, 'ನಮಗೆ ರಸ್ತೆ ಸರಿಯಾಗಬೇಕು' ಎಂದು ವಾದ ಮಂಡಿಸಿದಾಗ ಕೋಪದಲ್ಲಿ ಸಚಿವರು ರಿಕ್ಷಾ ಚಾಲಕನ ಮೇಲೆ ಕೈಯೆತ್ತಲು ಹೋದಾಗ ಅಲ್ಲಿದ್ದ ಕಾರ್ಯಕರ್ತರು ಅವರನ್ನು ಸಮಾಧಾನಪಡಿಸಿ ಕಳುಹಿಸಿದರು.
ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿರುವುದರಿಂದ ದುರಸ್ತಿಗೆ ಒತ್ತಾಯಿಸಿದ್ದು, ಸಚಿವರು ಮನವಿ ಸ್ವೀಕರಿಸದ ಸಂದರ್ಭ ಇತರರು ಧಿಕ್ಕಾರ ಕೂಗುವಾಗ ತಾನೂ ಧಿಕ್ಕಾರ ಹಾಕಿದ್ದಾಗಿ ರಿಕ್ಷಾ ಚಾಲಕ ಪ್ರಶಾಂತ್ ತಿಳಿಸಿದ್ದಾರೆ.