ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮುರುಳ್ಯ ಸಮೀಪ ಕುತ್ತಿಗೆ ಹಿಸುಕಿ, ತಲೆ ಜಜ್ಜಿ ಮಹಿಳೆ ಕೊಲೆ; ಆರೋಪಿ ಪರಾರಿ

Lingaraj Badiger
Updated On : 31 Dec 2013, 12:06 pm

ಸುಬ್ರಹ್ಮಣ್ಯ: ದಂಪತಿಯೆಂದು ಹೇಳಿ ಮನೆ ಕೆಲಸಕ್ಕೆಂದು ಬಂದು, ಮನೆಯ ಕೊಠಡಿಗೆ ಹೊಂದಿಕೊಂಡ ಕೊಠಡಿಯಲ್ಲಿ ನಿದ್ರಿಸಿದ್ದವರ ಪೈಕಿ ಮಹಿಳೆ,  ಮಲಗಿದ ಸ್ಥಿತಿಯಲ್ಲೇ ಕೊಲೆಯಾಗಿರುವ ಘಟನೆ ಮುರುಳ್ಯ ಸಮೀಪದ ಅಲೆಕ್ಕಾಡಿ ಕೊಡ್ಯಕಂಡ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕಮಲ (45) ಎಂದು ಅಂದಾಜಿಸಲಾಗಿದ್ದು. ಜೊತೆಯಲ್ಲಿ ಬಂದ ರವಿ ಎಂಬವನೇ ಕೊಂದಿರಬಹುದೆಂದು ಶಂಕಿಸಲಾಗಿದೆ.
 ಶಂಕಿತ ಆರೋಪಿ ರವಿ ಪರಾರಿಯಾಗಿದ್ದು, ಅದೇ ಮನೆಯಲ್ಲಿ ಮಲಗಿದ್ದ ತೋಟ ನೋಡಿಕೊಳ್ಳುವ ಮೇಸ್ತ್ರಿ ಮೋನಪ್ಪ ಎಂಬವರು ಬೆಳಗ್ಗೆ ಎದ್ದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರ: ಪುತ್ತೂರಿನಲ್ಲಿ ನ್ಯಾಯವಾದಿಯಾಗಿರುವ ದೇವಾನಂದ ಎಂಬವರಲ್ಲಿ ಕೆಲಸ ಅರಸಿಕೊಂಡು ಈ ಜೋಡಿ ಬಂದಿತ್ತು. ಈ ಪೈಕಿ ಮಹಿಳೆ ತಾನು ಕಮಲ, ಈತ ತನ್ನ ಗಂಡ ಎಂದು ಪರಿಚಯಿಸಿದ್ದಳು.
ಆ ವೇಳೆ ಆಕೆ, ತಾನು 27 ವರ್ಷಗಳ ಹಿಂದೆ ತಮ್ಮ ಆದಿ ಮನೆಯಲ್ಲಿ ಕೆಲಸ ಮಾಡಿದ್ದೆ ಎಂದು ನೆನಪಿಸಿದ್ದಳು. ಪರಿಚಯ ಇದ್ದುದರಿಂದ ತನ್ನ ತಂಗಿ ಚಂಚಲಾಕ್ಷಿಯನ್ನು ಸಂಪರ್ಕಿಸಿ ಕೆಲಸಕ್ಕೆ ಜನ ಬೇಕಾಗಿರುವುದನ್ನು ಖಚಿತಪಡಿಸಿಕೊಂಡು ತಂಗಿಯ ಮನೆಗೆ ಕೆಲಸಕ್ಕೆಂದು ಇವರಿಬ್ಬರನ್ನು ಭಾನುವಾರ ಸಂಜೆ ಕಳುಹಿಸಿಕೊಟ್ಟಿದ್ದರು.
 ಅದರಂತೆ ಇವರಿಬ್ಬರು ಕೊಡ್ಯಕಂಡ ಚಂಚಲಾಕ್ಷಿಯವರ ಆದಿ ಮನೆಗೆ ಬಂದಿದ್ದಾರೆ. ಅವರಿಗೆ ಮನೆಯಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡಿ ಖರ್ಚಿಗೆಂದು ರು. 300 ನೀಡಿ ಮೇಸ್ತ್ರಿ ಮೋನಪ್ಪ ಮನೆಯಲ್ಲಿದ್ದು ಅವನಲ್ಲಿ ಕೆಲಸದ ಮಾಹಿತಿ ಕೇಳಿಕೊಂಡು ತೋಟ ಕೆಲಸ ನಿರ್ವಹಿಸುವಂತೆ ಹೇಳಿ ತಾನು ಇರುವ ಮಂಗಳೂರಿನ ಮನೆಗೆ ಸಂಜೆ ತೆರಳಿದ್ದರು.
 ಮನೆಯ ಒಳಗಡೆ ಮೇಸ್ತ್ರಿ ಮಾತ್ರ ಇದ್ದು, ಪಕ್ಕದ ತೆರೆದ ಕೊಠಡಿಯಲ್ಲಿ ಇವರಿಬ್ಬರಿಗೆ ತಂಗಲು ಆಶ್ರಯ ನೀಡಲಾಗಿತ್ತು. ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ಎಚ್ಚರಗೊಂಡ ಮೇಸ್ತ್ರಿ ಮೋನಪ್ಪ ದನಗಳಿಗೆ ಮೇವು ಹಾಕಲು ಹೋಗುವಾಗ ಇಬ್ಬರೂ ಜೊತೆಯಲ್ಲೆ ಮಲಗಿರುವುದನ್ನು ಕಂಡಿದ್ದಾರೆ. 1 ಗಂಟೆಯ ಬಳಿಕ ಸುಮಾರು 6.15ಕ್ಕೆ ವಾಪಸ್ ಬಂದು ನೋಡುವಾಗ ಕೆಲಸದಾತ ರವಿ ನಾಪತ್ತೆಯಾಗಿದ್ದ. ಬಳಿಕ ಅಕ್ಕಪಕ್ಕದವರು ಬಂದು ಪರಿಶೀಲಿಸಿದಾಗ ಕಮಲ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕೊಲೆಯಾಗಿರುವುದು ತಿಳಿದುಬಂತು.
ಆಕೆಯ ಕುತ್ತಿಗೆ ಹಿಸುಕಿ ತಲೆಯನ್ನು ನೆಲಕ್ಕೆ ಜಜ್ಜಿ ಕೊಂದಿರುವ ಸಾಧ್ಯತೆ ಇದೆ. ರವಿ ರಬ್ಬರ್ ಟ್ಯಾಪಿಂಗ್, ಮರಕಡಿಯುವ ಕಾರ್ಯದಲ್ಲಿ ನಿಪುಣನಾಗಿದ್ದ.
ಕೊಲೆಗೆ ಕಾರಣವೇನು?: ಕೊಲೆಯಾದ ಕಮಲ ಮತ್ತು ಪರಾರಿಯಾದ ರವಿಗೆ ಎಂದಿನಿಂದ ಸಂಬಂಧವಿತ್ತು ಎಂಬ ಕುರಿತು ಸ್ಪಷ್ಟ ಮಾಹಿತಿ ಯಾರಿಗೂ ತಿಳಿದಿಲ್ಲ. ರಾತ್ರಿ ಬೆಳಗಾಗುವುದರೊಳಗೆ ಕಮಲಳ ಕೊಲೆ ಯಾಕಾಯ್ತೆಂಬುದು ಯಕ್ಷ ಪ್ರಶ್ನೆಯಾಗಿದೆ.
  ಕೊಲೆಯಾದ ಬಳಿಕ ಆತ ನಾಪತ್ತೆಯಾಗಿರುದರಿಂದ ಆತನೇ ಕೊಲೆ ಕೃತ್ಯ ನಡೆಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.
 ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಶ್ವಾನವನ್ನು ಕೂಡ ತರಿಸಲಾಗಿದ್ದು ಶ್ವಾನವು ಮೃತದೇಹ ಸ್ಥಳದಿಂದ ಮನೆಯ ಹಿಂಬದಿಯ ಮೇಲಿನ ಮಾರ್ಗದಲ್ಲಿ ಸಾಗಿ ಮುಖ್ಯ ರಸ್ತೆಯ ಬದಿ ಬಂದು ನಿಂತಿದೆ.
 ಕೊಲೆಗಾರ ವಾಹನದಲ್ಲಿ ಹತ್ತಿ ಪರಾರಿಯಾಗಿರುವ ಸಾದ್ಯತೆ ಇದೆ.
 ಪುತ್ತೂರು ಡಿವೈಎಸ್ಪಿ ಮೆಂಡೋನ್ಸ , ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಕೆ., ಸುಬ್ರಹ್ಮಣ್ಯ ಠಾಣಾಧಿಕಾರಿ ನಾಗೇಶ್ ಕದ್ರಿ ಮತ್ತು ತಂಡ ಬೇಟಿ ನೀಡಿದ್ದು ತನಿಕೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement