ಸುಂಟಿಕೊಪ್ಪ ನಾಡು ಪ್ರೌಢಶಾಲೆ ವಾರ್ಷಿಕೋತ್ಸವ
ಸುಂಟಿಕೊಪ್ಪ: ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅದರೆ ಆ ಪ್ರತಿಭೆಗಳನ್ನು ಗುರಿತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕಿದೆ ಎಂದು ಆನಂದ ತೀರ್ಥ ಕೆ. ಭಾರದ್ವಜ್ ತಿಳಿಸಿದರು. ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ 49ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರ ಬರಬೇಕು ಆಗ ಮಾತ್ರ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಾದ್ಯವಾಗಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಬಿ.ಸಿ.ಸುಲೋಚನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೋಮವಾರಪೇಟೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಣಿ ಸಂತೋಷ್, ತಾಲೂಕು ಪಂಚಾಯಿತಿ ಸದಸ್ಯೆ ಶಂಕರ ನಾರಾಯಣ ಮಾತನಾಡಿದರು. ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಎನ್. ಲಲಿತ, ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಸ್.ಬಿ. ಶಂಕರ್, ಸದಸ್ಯ ಕೊರಗಪ್ಪ, ಮೀನಾ ಸೋಮಯ್ಯ, ಮತ್ತಿತರರು ಉಪಸ್ಥಿತರಿದ್ದರು. ಚಾಂದನಿ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎ.ಸಾವಿತ್ರಿ ಸ್ವಾಗತಿಸಿದರು. ಶಿಕ್ಷಕಿ ಕೆ. ಇಂದಿರಾ ವರದಿ ವಾಚಿಸಿದರು. ಗೂಕರ್ ನಿರ್ವಹಿಸಿದರು.
ನಾಪೊಕ್ಲು ಪಿಯು ಕಾಲೇಜು ವಾರ್ಷಿಕೋತ್ಸವ
ನಾಪೋಕ್ಲು : ನಾಪೋಕ್ಲು ಪ.ಪೂ.ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆಯ ಸಾಂಸ್ಕೃತಿಕ ಮತ್ತು ಕ್ರೀಡಾ ವಾರ್ಷಿಕೋತ್ಸವ ಜರುಗಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ.ಎಚ್.ಇಬ್ರಾಹಿಂ, ಉಪಾಧ್ಯಕ್ಷ ಕರವಂಡ ಲವಾ ನಾಣಯ್ಯ, ನಿವೃತ್ತ ಶಿಕ್ಷಕ ಬಾದುಮಂಡ ಮುತ್ತಪ್ಪ, ರಾಷ್ಟ್ರೀಯ ಹಾಕಿ ತೀರ್ಪುಗಾರ ಕಾಟುಮಣಿಯಂಡ ಉಮೇಶ್, ಶಿಕ್ಷಕ, ಪೋಷಕ, ವಿದ್ಯಾರ್ಥಿ ವರ್ಗ ಹಾಜರಿದ್ದರು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಂಗಳವಾರ ಕಾರ್ಯಕ್ರಮ ಸಮಾರೋಪಗೊಳ್ಳಲಿದ್ದು, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀಪುರಂ ಕ್ಷೇತ್ರದಲ್ಲಿ
ಬಾಲಕೃಷ್ಣ ವಿಶೇಷ ಪೂಜೆ
ಸುಂಟಿಕೊಪ್ಪ: ಸುಂಟಿಕೊಪ್ಪದ ನಿವಾಸಿ ಬಾಲಕೃಷ್ಣ ಕಳೆದ 50 ವರ್ಷಗಳಿಂದ ನಿರಂತರವಾಗಿ ಶಬರಿಮಲೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದು ಇದರ ಅಂಗವಾಗಿ ಶ್ರೀಪುರಂ ಅಯ್ಯಪ್ಪ ಕ್ಷೇತ್ರದಲ್ಲಿ ಜ.1ರಂದು ಸಂಜೆ 7 ಗಂಟೆಗೆ ವಿಶೇಷ ಪೂಜೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಶ್ರೀ ಪುರಂ ಅಯ್ಯಪ್ಪ ಕ್ಷೇತ್ರ ದೇವಾಲಯ ಸಮಿತಿ ವತಿಯಿಂದ ನಡೆಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ನೀರಿಗೆ ಬಿದ್ದು ಮೃತ್ಯು
ಸುಳ್ಯ: ಮಂಡೆಕೋಲು ಗ್ರಾಮದ ಉಗ್ರಾಣಿಮನೆ ಬಳ್ಳಕಜೆ ಶೇಷಪ್ಪ ಗೌಡ (55) ನೀರಿಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮಧ್ಯಾಹ್ನ ಬಿದಿರಿನ ಗಳೆಯನ್ನು ಗುಡ್ಡದಿಂದ ಕಡಿದು ತಂದ ಅವರು ಕೆರೆಯಲ್ಲಿ ನೆನೆಯಲು ಹಾಕಲೆಂದು ಕೆರೆಯ ಬದಿಗೆ ಹೋಗಿ ಗಳೆಯನ್ನು ನೀರಿಗೆ ಹಾಕುವಾಗ ಆಯತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ. ಹೋದವರು ಹಿಂತಿರುಗಲಿಲ್ಲವೇಕೆಂದು ಮನೆಯವರು ಬಂದು ನೋಡಿದಾಗ ಕೆರೆಗೆ ಬಿದ್ದಿರುವುದು ತಿಳಿದು ಬಂತು. ವಿಷಯ ತಿಳಿದು ಸ್ಥಳೀಯರು ಬಂದು ನೀರಿನಿಂದ ಶೇಷಪ್ಪರ ಶವ ಮೇಲಕ್ಕೆತ್ತಿದರು.
ಸುಳ್ಯ; ಸರಸ್ವತಿ ಸಹಕಾರಿ ಸಂಸ್ಥೆ ದಶಮಾನೋತ್ಸವ
ಸುಳ್ಯ: ಅತ್ಯಂತ ಸರಳವಾಗಿ ಆರ್ಥಿಕ ಸೌಲಭ್ಯವನ್ನು ಒದಗಿಸುವ ಸಹಕಾರಿ ಕ್ಷೇತ್ರದಿಂದಿಂದ ಕೃಷಿಕರಿಗೆ ಆರ್ಥಿಕ ಸ್ವಾವಲಂಬನೆಯನ್ನು ಪಡೆಯಲು ಸಾಧ್ಯವಾಗಿದೆ. ಈ ಸಹಕಾರಿ ಸೌಹಾರ್ದತೆಯು ಸಮಾಜಕ್ಕೆ ಇನ್ನಷ್ಟು ಬೆಳಕನ್ನು ನೀಡಲಿ ಎಂದು ವಿಧಾನ ಸಭೆ ಮಾಜಿ ಸ್ಪೀಕರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.
ಅವರು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಶನಿವಾರ ನಡೆದ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸುಳ್ಯ ಶಾಖೆಯ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರು ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರಣ ಸಹಕಾರಿ ಸಂಸ್ಥೆಗಳು ಮತ್ತು ಕೃಷಿಕರು ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಪರಸ್ಪರ ವಿಶ್ವಾಸದಿಂದ ಮತ್ತು ವಿಭಿನ್ನತೆಯಿಂದ ಕೆಲಸ ಮಾಡಿ ಯಶಸ್ಸು ಪಡೆದ ಸರಸ್ವತಿ ಕ್ರಡಿಟ್ ಸೌಹಾರ್ದ ಸಂಸ್ಥೆಯು ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲೂ ಶಾಖೆಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶಕ್ಕೂ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ವಿನಯಕುಮಾರ್ ಕಂದಡ್ಕ ಸ್ವಾಗತಿಸಿದರು. ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಪ್ರಸ್ತಾವನೆಗೈದರು. ಸತ್ಯಭಾಮ ಪ್ರಾರ್ಥಿಸಿದರು. ಶಿವಪ್ರಸಾದ್ ಬೆಟ್ಟಂಪಾಡಿ ನಿರೂಪಿಸಿದರು.