ಹೈದಂಗೂರು ಪರಿಸರದಲ್ಲಿ ಹುಲಿ, ಚಿರತೆ
ಸುಳ್ಯ: ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ಮತ್ತು ಹೈದಂಗೂರು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಹುಲಿ ಮತ್ತು ಚಿರತೆ ಕಾಣಸಿಕ್ಕಿದ್ದು ಊರವರಲ್ಲಿ ಆತಂಕಕ್ಕೆ ಎಡೆಮಾಡಿದೆ. ಕೊಡಪಾಲ ಸುಬ್ರಹ್ಮಣ್ಯ ಪ್ರಸಾದ್ ಎಂಬವರು ತಮ್ಮ ಮನೆಗೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ಮನೆಯ ಸಮೀಪ ರಸ್ತೆಯಲ್ಲಿ 12 ಮೀಟರ್ ಅಂತರದಲ್ಲಿ ಹುಲಿ ರಸ್ತೆಗೆ ನೆಗೆದು ಕಾಡಿನ ಕಡೆಗೆ ಹೋಗುವುದು ಕಂಡು ಬಂತು. ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪ್ರಾಣಿಯ ಹೆಜ್ಜೆ ಗುರುತಿನ ಪರಿಶೀಲನೆ ನಡೆಸಿದರು.
ಸುಳ್ಯದಿಂದ ಮರ್ಕಂಜಕ್ಕೆ ಹೋಗುತ್ತಿದ್ದ ಸರ್ವಿಸ್ ವ್ಯಾನ್ನಲ್ಲಿ ಇದ್ದವರಿಗೂ ಹುಲಿ ರಸ್ತೆ ದಾಟಿ ಹೈದಂಗೂರು ಕಡೆ ಹೋಗುವುದು ಕಂಡು ಬಂದಿದೆ. ಅವರು ಹೈದಂಗೂರು ಪರಿಸರದವರಿಗೆ ಫೋನ್ ಮಾಡಿ ತಿಳಿಸಿದರು. ರಾತ್ರಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪಟಾಕಿ ಸಿಡಿಸಿದರು.
ಮರ್ಕಂಜ ಗ್ರಾಮದ ಹೈದಂಗೂರಿನ ಬೋಜಪ್ಪ ಗೌಡ ಎಂಬವರ ನಾಯಿ ರಾತ್ರಿ ಜೋರಾಗಿ ಬೊಗಳುತ್ತಿದ್ದು, ಸ್ವಲ್ಪ ಹೊತ್ತಿನ ಬಳಿಕ ನಾಯಿಯ ಕೂಗು ಕೇಳದಿದ್ದಾಗ ಮನೆಯವರು ಹೊರಗಡೆ ಬಂದು ನೋಡಿದರೆ ನಾಯಿ ನಾಪತ್ತೆಯಾಗಿದ್ದು, ಹುಲಿ ಅದನ್ನು ಕೊಂಡುಹೋಗಿರಬಹುದು ಎಂದು ಹೇಳಲಾಗುತ್ತಿದೆ.
ದಾಸರಬೈಲಿನಲ್ಲಿ ಚಿರತೆ: ಮೈರಾಜೆ ರಾಮಚಂದ್ರ ಭಟ್ ಎಂಬವರು ಜೀಪ್ನಲ್ಲಿ ಬರುತ್ತಿದ್ದಾಗ ದಾಸರಬೈಲು ಶಾಲಾ ಬಳಿ ಕಾಡಿನಲ್ಲಿ ಚಿರತೆ ಇದ್ದುದನ್ನು ಕಂಡಿದ್ದಾರೆ. ಮರ್ಕಂಜ ಗ್ರಾಮದ ದಾಸರಬೈಲು ಬಳಿ ಹಗಲಿನಲ್ಲಿ ಚಿರತೆಯನ್ನು ಕಂಡಿದ್ದ ಕಾರಣ ಮತ್ತು ಕೊಡಪಾಲದಲ್ಲಿ ರಾತ್ರಿ ಹುಲಿಯು ಕಾಣಸಿಕ್ಕಿದೆ. ಹೈದಂಗೂರಿನಲ್ಲಿ ನಾಯಿಯನ್ನು ಕೊಂಡು ಹೋಗಿರುವುದು ಹುಲಿಯಂತೆ ಕಂಡಿರುವ ಚಿರತೆ ಆಗಿರಬಹುದೇ ಎಂದು ಜನರಾಡಿಕೊಳ್ಳುತ್ತಿದ್ದಂತೆ ಮತ್ತೆ ಹುಲಿ ಪ್ರತ್ಯಕ್ಷವಾಗಿದೆ.