ಗೂಡ್ಸ್ ರಿಕ್ಷಾ ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ
ಕೊಲ್ಲೂರು: ಇಲ್ಲಿನ ಚಿತ್ತೂರು ಗ್ರಾಮದ ಆಲೂರು ಮಾರುಕೈ ಎಂಬಲ್ಲಿ ಪಾದಚಾರಿಗೆ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಗುರುರಾಜ ಆಚಾರಿ ಮೃತರು. ಇವರು ಸ್ನೇಹಿತರಾದ ಬಸವರಾಜ್, ದೇವರಾಜ್ ಹಾಗೂ ಉದಯ ಪೂಜಾರಿ ಎಂಬವರೊಂದಿಗೆ ಕಾಲು ನಡಿಗೆಯಲ್ಲಿ ಮಾರಣಕಟ್ಟೆಯ ದೇವರ ದರ್ಶನ ಮಾಡಿ ನಂತರ ವಾಪಾಸ್ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಕುಂದಾಪುರ ಕಡೆಗೆ ಬರುತ್ತಿರುವಾಗ ಚಿತ್ತೂರು ಗ್ರಾಮದ ಆಲೂರು ಮೂರಕೈ ಬಳಿ ಸತೀಶ್ ಪೂಜಾರಿ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ ನಾಲ್ವರಿಗೂ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಗುರುರಾಜ್ ಆಚಾರಿಯನ್ನು ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆಸ್ಪತ್ರೆ ಬಳಿ ಮೃತಪಟ್ಟಿದ್ದಾರೆ. ಇತರ ಗಾಯಾಳುಗಳನ್ನು ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸವರಾಜ್ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಫೋಟಕ ಬಳಸಿ ಅಕ್ರಮ
ಗಣಿ; ಪೊಲೀಸ್ ದಾಳಿ
ಹೆಬ್ರಿ ; ಇಲ್ಲಿನ ನಾಲ್ಕೂರು ಗ್ರಾಮದ ಕಜಿಕೆ ಎಂಬಲ್ಲಿ ಸ್ಫೋಟಕಗಳನ್ನು ಬಳಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಹೆಬ್ರಿ ಠಾಣೆಯ ಪೊಲೀಸ್ ಉಪನಿರೀಕ್ಷಕ ಸೀತಾರಾಮ ಪಿ. ಮತ್ತು ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ಬಯಲಿಗೆಳೆದಿದ್ದಾರೆ. ಈ ಕ್ವಾರಿ ನಡೆಯುತ್ತಿದ್ದ ಜಾಗ ಸರ್ಕಾರಿ ಭೂಮಿಯಾಗಿದೆ. ವ್ಯಕ್ತಿಯೊಬ್ಬರು ಇನ್ನಿಬ್ಬರೊಂದಿಗೆ ಸೇರಿಕೊಂಡು ಸುಮಾರು 2 ಎಕರೆ ಸರ್ಕಾರಿ ಜಾಗದಲ್ಲಿ ಅಕ್ರಮ ಸ್ಫೋಟಕಗಳನ್ನು ಬಳಸಿ ಬಂಡೆಕಲ್ಲುಗಳನ್ನು ಸ್ಫೋಟಿಸಿ ಶಿಲೆ ಕಲ್ಲುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಇದು ಭೂಕಂದಾಯ ಕಾಯ್ದೆಯ ಉಲ್ಲಂಘನೆಯಾಗಿರುವುದರಿಂದ ನಾಲ್ಕೂರು ಗ್ರಾಮದ ಕರಣಿಕ ಕ್ಲೇರೆನ್ಸ್ ಲೆಸ್ಟನ್ ಕರ್ನೇಲಿಯೋ ಉಪಸ್ಥಿತಿಯಲ್ಲಿ ಆರೋಪಿಗಳ ವಿರುದ್ಧ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.