ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಎಸ್‌ವೈ ಬಿಜೆಪಿಗೆ; ಜನತೆ ದಡ್ಡರಲ್ಲ-ಪೂಜಾರಿ

Vishwanath S
Updated On : 1 Jan 2014, 1:04 am

ಮಂಗಳೂರು: ಹಿಂದೆ ಬಿಜೆಪಿ ಬೈಯುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಸೇರ್ಪಡೆ ಮಾತನ್ನಾಡುತ್ತಿದ್ದಾರೆ. ಅವರಿಗೆ ಶಹಭಾಸ್, ಅಂದರೆ ಬಿಜೆಪಿಗೆ ಬಿಎಸ್‌ವೈ ಬೇಕು, ಇಲ್ಲಾದರೆ ಬಿಜೆಪಿ ಉಳಿಯೋಲ್ಲ ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
 ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆ ಉಸಿರು ಇರುವವರೆಗೆ ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದ ಬಿಎಸ್‌ವೈ, ತನ್ನ ಸ್ಥಿತಿಗೆ ರಾಜ್ಯ ಹಾಗೂ ಕೇಂದ್ರ ನಾಯಕರು ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ ಬಿಜೆಪಿ ಮುಖಂಡರು ಕೂಡ ಬಿಎಸ್‌ವೈ ಅನಿವಾರ್ಯ ಅಲ್ಲ ಎಂಬುದನ್ನು ಸಾರಿ ಹೇಳಿದ್ದರು. ಈಗ ಇವರೆಲ್ಲ ಸೇರಿ ಬಿಎಸ್‌ವೈಗೆ ಮಣೆ ಹಾಕುತ್ತಿರುವುದನ್ನು ಕಂಡರೆ, ಬಿಎಸ್‌ವೈ ಇಲ್ಲದಿದ್ದರೆ ಬಿಜೆಪಿ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ತೋರಿಸುತ್ತದೆ ಎಂದು ಲೇವಡಿ ಮಾಡಿದರು.
 ರಾಜ್ಯದಲ್ಲಿ ಭಾಷಣ ಮಾಡಿದ ಬಿಜೆಪಿಯ ನರೇಂದ್ರ ಮೋದಿ, ಇಲ್ಲಿನ ಭ್ರಷ್ಟಾಚಾರ ವಿಚಾರ ಪ್ರಸ್ತಾಪಿಸುವುದಿಲ್ಲ. ಅಂಥ ಭ್ರಷ್ಟಾಚಾರಿ ಬಿಎಸ್‌ವೈಯನ್ನೇ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಜನತೆ ದಡ್ಡರಲ್ಲ ಎಂಬುದನ್ನು ಬಿಜೆಪಿ ತಿಳಿದುಕೊಳ್ಳಲಿ ಎಂದು ಪೂಜಾರಿ ಹೇಳಿದರು.
ಅಡಕೆ ನಿಷೇಧ ಇಲ್ಲ ಎನ್ನಿ: ಕೇಂದ್ರ ಸರ್ಕಾರ ಅಡಕೆ ನಿಷೇಧಕ್ಕೆ ಮುಂದಾಗುವುದಿಲ್ಲ, ಅದೇ ರೀತಿ ಸುಪ್ರೀಂ ಕೋರ್ಟ್ ಕೂಡ ಅಡಕೆ ನಿಷೇಧಿಸಲು ಮುಂದಾಗದು. ಹಾಗಾಗಿ ಅಡಕೆ ನಿಷೇಧವಾಗುವುದಿಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಬೆಳೆಗಾರರಲ್ಲಿ ಧೈರ್ಯ ತುಂಬಬೇಕು ಎಂದು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.
 ಈಚೆಗೆ ನಡೆದ ಕೆಪಿಸಿಸಿ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದ್ದು, ಸುಪ್ರೀಂ ಕೋರ್ಟ್ ಎದುರು ಸಮರ್ಥ ವಾದ ಮಂಡನೆಗೆ ರಾಜ್ಯ ಸರ್ಕಾರದಿಂದಲೂ ವಕೀಲರ ನೇಮಿಸಲು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಒಪ್ಪಿಗೆ ಸೂಚಿಸಿದ್ದಾರೆ. ಹೀಗಿರುವಾಗ ಅಡಕೆ ನಿಷೇಧದ ಕೂಗೆಬ್ಬಿಸಿ ಮಾರುಕಟ್ಟೆಯಲ್ಲಿ ಧಾರಣೆ ಕುಸಿತ ಕಾಣುವಂತಾಗಿದೆ. ಅಲ್ಲದೆ ಬೆಳೆಗಾರರು ಕೃಷಿತೋಟ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಇದನ್ನು ತಡೆಗಟ್ಟಿ ಬೆಳೆಗಾರರಲ್ಲಿ ಧೈರ್ಯ ತುಂಬಲು ಪ್ರತಿಭಟನೆ ನಡೆಸುವ ಬದಲು ಅಡಕೆ ನಿಷೇಧ ಇಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳೂ ಒಕ್ಕೊರಲಿನಿಂದ ಹೇಳಬೇಕು. ಒಂದು ವೇಳೆ ಅಡಕೆ ನಿಷೇಧಕ್ಕೆ ಮುಂದಾದರೆ ತಾನು ಕೊನೆ ಉಸಿರಿನ ತನಕ ಹೋರಾಟ ನಡೆಸುವುದಾಗಿ ಪೂಜಾರಿ ಹೇಳಿದರು.
ಪೇಜಾವರಶ್ರೀ ನಿರ್ಧಾರ ಸ್ವಾಗತ: 'ಮಾನವರು ಹೊರುವ ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದಿಲ್ಲ' ಎಂಬ ಪೇಜಾವರಶ್ರೀ ನಿರ್ಧಾರವನ್ನು ಸ್ವಾಗತಿಸಿದ ಪೂಜಾರಿ, ಇತರೆ ಮಠಾಧಿಪತಿಗಳೂ ಇವರ ಹಾದಿಯನ್ನು ತುಳಿಯಲು ಮುಂದಾಗಬೇಕು ಎಂದು ನುಡಿದರು.
 ನಿಡ್ಡೋಡಿಯಲ್ಲಿ ಸ್ಥಾಪಿಸಲುದ್ದೇಶಿಸಿದ ಉಷ್ಣವಿದ್ಯುತ್ ಸ್ಥಾವರವನ್ನು ವಿರೋಧಿಸುವುದಾಗಿ ಹೇಳಿದರು. ಸಚಿವ ಸಂಪುಟಕ್ಕೆ ಇಬ್ಬರ ಸೇರ್ಪಡೆ ಕುರಿತು ಪ್ರತಿಕ್ರಿಯಿಸಲು ಪೂಜಾರಿ ನಿರಾಕರಿಸಿದರು.
 ಪ್ರಭಾರ ಜಿಲ್ಲಾಧ್ಯಕ್ಷ ಇಬ್ರಾಹಿಂ, ಕಳ್ಳಿಗೆ ತಾರನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ, ವಕ್ತಾರ ಸುಧೀರ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement