ಸಚಿವ ಜೈನ್ ಮಾನಹಾನಿಗೆ ವಿಪಕ್ಷ ಯತ್ನ: ಆಸೀಫ್ ಆರೋಪ
ಮೂಲ್ಕಿ: ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಕ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ವಿಶೇಷ ತಹಸೀಲ್ದಾರ್ ನೇಮಕ ಮಾಡಿರುವ ಸಚಿವ ಅಭಯಚಂದ್ರ ಜೈನ್ ರೊಚ್ಚಿಗೇಳುವಂತೆ ಮಾಡಿ, ಅವರ ಮಾನಹಾನಿ ಉದ್ದೇಶದಿಂದ ವಿಪಕ್ಷಗಳು ಪ್ರತಿಭಟನೆ ನಡೆಸಿವೆ ಎಂದು ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ತಹಸೀಲ್ದಾರ್ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ವಿಪಕ್ಷಗಳು ಉದ್ದೇಶ ಪೂರ್ವಕವಾಗಿ ಪ್ರತಿಭಟನೆ ನಡೆಸಿದೆ. ಶಾಂತಿಪ್ರಿಯರಾಗಿರುವ ಸಚಿವರು ಯಾರ ಮೇಲೆ ಹಲ್ಲೆ ನಡೆಸಿಲ್ಲ, ಉದ್ದೇಶಪೂರ್ವಕವಾಗಿ ಅವರ ಮಾನಹಾನಿ ಮಾಡುವ ಉದ್ದೇಶದಿಂದ ಇಂತಹ ಕೃತ್ಯವೆಸಗಿದ್ದು, ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮೂಲ್ಕಿ ನಗರ ಪಂಚಾಯಿತಿ ನಿರ್ಗಮನ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಸಂತ ಬೆರ್ನಾಡ್, ಹಿರಿಯ ಕಾಂಗ್ರೆಸಿಗ ಎಂ.ಬಿ. ನೂರು ಮಹಮ್ಮದ್, ಗುಣಪಾಲ ಶೆಟ್ಟಿ, ಗುರುರಾಜ್ ಪೂಜಾರಿ, ಶ್ಯಾಲೆಟ್ ಪಿಂಟೋ, ಧನಂಜಯ ಕೋಟ್ಯಾನ್ ಇದ್ದರು.