ಆಸ್ಪತ್ರೆ ಸೆಲ್‌ನಿಂದ ಕೈದಿ ಪರಾರಿ
ಮಂಗಳೂರು: ವೆನ್ಲಾಕ್ ಆಸ್ಪತ್ರೆ ಕೈದಿ ಸೆಲ್‌ನಲ್ಲಿ ದಾಖಲಾಗಿದ್ದು ಹುಬ್ಬಳ್ಳಿ ರಾಜೇಶ್ ಪರಾರಿಯಾಗಿದ್ದಾನೆ. ಮಂಗಳೂರು ಜೈಲ್‌ನಲ್ಲಿದ್ದ ಕೈದಿ ಹುಬ್ಬಳ್ಳಿ ರಾಜೇಶ್ ಜ.23ರಂದು ಅನಾರೋಗ್ಯ ನಿಮಿತ್ತ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಪೊಲೀಸರು ಊಟ ನೀಡುವಾಗ, ದೂಡಿ ಪರಾರಿಯಾಗಿದ್ದಾರೆ. ತುಮಕೂರು ಹುಬ್ಬಳ್ಳಿಯ ರೇಪ್, ಕಿಡ್ನಾಪ್ ಪ್ರಕರಣಗಳ ಆರೋಪಿ. ಈತನ ಮೇಲೆ ಒಟ್ಟು 5 ಪ್ರಕರಣ ದಾಖಲಾಗಿದೆ. ಈ ಹಿಂದೆಯೂ 2 ಬಾರಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನೇತ್ರಾವದಿ ನದಿಯಲ್ಲಿ ಬೈಕ್ ಪತ್ತೆ
ಬಂಟ್ವಾಳ: ಇಲ್ಲಿನ ನೇತ್ರಾವತಿ ನದಿಯಲ್ಲಿ ಮುಳುಗಿದ ಸ್ಥಿತಿಯಲ್ಲಿ ಬೈಕೊಂದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಂಟ್ವಾಳ ಪೇಟೆಯಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕಿಸುವ ಕಂಚಿಕಾರ ಪೇಟೆಯಲ್ಲಿರುವ ಕಿರುಸೇತುವೆಯಡಿ ನೇತ್ರಾವತಿ ನದಿಗೆ ಸೇರುವ ತೊರೆಯಲ್ಲಿ ಬೈಕ್ ಕಂಡು ಬಂದಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಬೆಳಗಿನ ಜಾವ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ನಗರ ಠಾಣಾಧಿಕಾರಿ ಶೇಖರ್ ಸೇರಿದಂತೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನೊಂದಿಗೆ ನೀರಲ್ಲಿ ಮುಳುಗಿದ್ದ ಬೈಕನ್ನು ಮೇಲಕೆತ್ತಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ನದಿಗೆ ಯಾರಾದರೂ ಬಿದ್ದಿದ್ದಾರೆಯೇ ಎಂದು ಹುಡುಕಾಟ ನಡೆಸಿದರಾದರೂ ಏನೂ ಪತ್ತೆಯಾಗಿಲ್ಲ. ಈ ಕಿರು ಸೇತುವೆಯಲ್ಲಿ ಈ ಹಿಂದೆಯೇ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಆದರೂ ದ್ವಿಚಕ್ರ ಹಾಗೂ ತ್ರಿಚಕ್ರವಾಹನಗಳು ಸರಾಗವಾಗಿ ಸಂಚರಿಸುತ್ತಿದ್ದವು. ರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ತಡೆಗೋಡೆಯಿಲ್ಲದ ಕಿರುಸೇತುವೆ ಮೇಲಿಂದ ಆಕಸ್ಮಿಕವಾಗಿ ಬೈಕ್ ಬಿದ್ದಿರಬಹುದೇ ಅಥವಾ ಯಾವುದಾದರೂ ಕೃತ್ಯಕ್ಕೆ ಬೈಕನ್ನು ಬಳಸಿ ಸೇತುವೆ ಮೇಲಿಂದ ತಳ್ಳಿ ಪರಾರಿಯಾಗಿರಬಹುದೇ ಎಂಬ ಹಲವಾರು ಸಂಶಯಗಳಿಗೆ ಈ ಘಟನೆ ಅವಕಾಶ ಮಾಡಿಕೊಟ್ಟಿದೆ. ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ. ಈ ಬೈಕ್ ಚಿಕ್ಕಮಗಳೂರು ನೋಂದಣಿ ಸಂಖ್ಯೆಯನ್ನೊಳಗೊಂಡಿದೆ.
ರಿಕ್ಷಾ- ಬೈಕ್ ಡಿಕ್ಕಿ: ಇಬ್ಬರು ಗಂಭೀರ
ಸುಳ್ಯ: ಬೈಕ್ ಮತ್ತು ರಿಕ್ಷಾ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಪಂಜದ ಅಡ್ಡಬೈಲು ಎಂಬಲ್ಲಿ ಬೈಕ್ ಮತ್ತು ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದುದರ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಕಂಬಳ ದೊಡ್ಡಣ್ಣ ಗೌಡ ಮತ್ತು ಕಾಣಿಕೆ ದಾಮೋದರ ಗೌಡರಿಗೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ಚಾಲಕ ಯಶೋಧರ ಕಲ್ಲಾಜೆ, ಸುಬ್ರಹ್ಮಣ್ಯದ ಗಂಗಾಧರ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.