'ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನಕ್ಕೆ ಕ್ರಮ'
ಮಲ್ಪೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಸರ್ಕಾರ ರಚನೆಯಾದ ಒಂದೇ ತಿಂಗಳಲ್ಲಿ ಉಡುಪಿ ಜಿಲ್ಲೆಯ ರೈತರ, ಕಾರ್ಮಿಕರ ಆಶಾಕಿರಣವಾಗಿದ್ದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲಾಗುವುದು, ಅದಕ್ಕೆ ಅಗತ್ಯವಿರುವ ರು. 60 ಕೋಟಿಯನ್ನು ಏಕಕಂತಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಘೋಷಿಸಿದ್ದಾರೆ.
ದ.ಕ.- ಉಡುಪಿ ಜಿಲ್ಲೆಯಲ್ಲಿ 'ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಪಾದಯಾತ್ರೆಯ 4ನೇ ಮತ್ತು ಕೊನೆಯ ದಿನ ಶುಕ್ರವಾರ ಇಲ್ಲಿನ ಏಳೂರು ಮೊಗವೀರ ಸಭಾ ಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ, ಈಗ ಕೆಜೆಪಿಯ ನಾಯಕರಾಗಿರುವ ಯಡಿಯೂರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಗೆ ಮೊದಲು ಇದೇ ಮಲ್ಪೆಯಲ್ಲಿ ಭಾಷಣ ಮಾಡುತ್ತಾ ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಪುನರುಜ್ಜೀವಕ್ಕೆ ಬೇಕಾದ ಹಣವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಅದನ್ನು ಅಲ್ಲಿಯೇ ಮರೆತುಬಿಟ್ಟಿದ್ದರು ಎಂದರು.
ಕರಾವಳಿ ಜಿಲ್ಲೆಗಳ ಮಟ್ಟಿಗೆ ಬಿಜೆಪಿ ಸರ್ಕಾರ ಸಾಧನೆ ಏನೇನೂ ಇಲ್ಲ, ಅತ್ಯಂತ ಶಾಂತವಾಗಿದ್ದ ಈ ಜಿಲ್ಲೆಗಳ ಶಾಂತಿಯನ್ನು ಕದಡಿದ್ದು, ನೈತಿಕ ಪೊಲೀಸ್ ಗಿರಿ ಆರಂಭಿಸಿದ್ದು, ಬಿಜೆಪಿ ಸರ್ಕಾರದ ದೊಡ್ಡ ಸಾಧನೆ ಎಂದು ಟೀಕಿಸಿದ ಡಾ. ಪರಮೇಶ್ವರ್, ಇದೀಗ ಇಲ್ಲಿನ ಸಾಮರಸ್ಯವನ್ನು ಪುನಃ ಸ್ಥಾಪಿಸುವುದಕ್ಕೆ ಕಾಂಗ್ರೆಸ್ ಈ ನಡಿಗೆ ಕಾರ್ಯಕ್ರಮವನ್ನು ನಡೆಸಿದೆ, ಇದು ಯಶಸ್ವಿಯಾಗಲಿದೆ ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಉಡುಪಿ- ದ.ಕ. ಜಿಲ್ಲೆಯಲ್ಲಿ ಸಾಮರಸ್ಯ ಕಾಪಾಡುವುದಕ್ಕೆ ಬಹಳ ಸುಲಭದ ದಾರಿ ಇದೆ. ಇಲ್ಲಿನ 13 ಶಾಸಕ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ, ಸಾಮರಸ್ಯ ಉಳಿಯುತ್ತದೆ ಎಂದರು.
ಸಭೆಯಲ್ಲಿ ಎಐಸಿಸಿ ನಾಯಕ ಆಸ್ಕರ್ ಫೆರ್ನಾಂಡಿಸ್, ಸಂಸದ ಜಯಪ್ರಕಾಶ ಹೆಗ್ಡೆ, ಕಾಂಗ್ರೆಸ್ ನಾಯಕರಾದ ಜನಾರ್ದನ ಪೂಜಾರಿ, ಸಿ.ಎಂ. ಇಬ್ರಾಹಿಂ, ಗೋಪಾಲ ಭಂಡಾರಿ, ಅಭಯಚಂದ್ರ ಜೈನ್, ಪ್ರತಾಪ್ಚಂದ್ರ ಶೆಟ್ಟಿ, ಯು.ಟಿ. ಖಾದರ್, ಎಸ್.ಆರ್. ಪಾಟೀಲ್, ಐವನ್ ಡಿ' ಸೋಜ, ವೀರಣ್ಣ ಮತ್ತಿಕಟ್ಟಿ, ಸರಳಾ ಕಾಂಚನ್, ಜಿ.ಎ. ಭಾವ, ಬಿ.ಎಂ. ಮೊಯ್ದೀನ್, ಗೋಪಾಲ ಪೂಜಾರಿ, ಬೋಸ್‌ರಾಜ್, ವೇಣುಗೋಪಾಲ್, ಐ.ಬಿ. ಸನದಿ, ಶ್ಯಾಮಲಾ ಭಂಡಾರಿ ಇದ್ದರು.