ವಿಶ್ವಧರ್ಮ ಪಾಲನೆಯಾಗಲಿ: ಶಿಮಂತೂರು
ಉಪ್ಪಿನಂಗಡಿ:(ದಿ.ಬಿ.ಎಂ. ಇದಿನಬ್ಬ ಸಭಾಂಗಣ, ದಿ.ತಾಳ್ತಜೆ ಕೃಷ್ಣಭಟ್ ವೇದಿಕೆ): ಸತ್ಯದರ್ಶನ ಮೂಡಿಸುವ ಸಾಹಿತ್ಯದ ಮೂಲಕ ವಸುಧೈವ ಕುಟುಂಬಂ ಎಂಬ ವಿಶ್ವಧರ್ಮದ ಪಾಲನೆಯಾಗಬೇಕು. ಜಾತಿ, ಮತ ಭೇದಗಳಿಂದ ವಿಭಜಿತವಾಗಿರುವ ಸಮಾಜವನ್ನು ಸಾಮರಸ್ಯ ಭಾವದಿಂದ ಒಗ್ಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನಗಳು ಪ್ರೇರಕಶಕ್ತಿಯಾಗಲಿ ಎಂದು 18ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನಧ್ಯಾಕ್ಷ ಡಾ. ಶಿಮಂತೂರು ಎನ್. ನಾರಾಯಣ ಶೆಟ್ಟಿ ಕರೆ ನೀಡಿದರು.
ಉಪ್ಪಿನಂಗಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ದ.ಕ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಾಗೃತ ಭಾವದ ತಳಹದಿಯಲ್ಲಿ ವಿವೇಕವು ಕಾರ್ಯಪ್ರವೃತ್ತವಾಗುವುದಕ್ಕೆ ಸಾಹಿತ್ಯ ಮೂಲ ಕಾರಣ. ಇಂತಹ ಸಾಹಿತ್ಯವು ಎಲ್ಲರ ಜೀವನದ ಅಂಗವಾಗಬೇಕು. ಸಾಹಿತ್ಯದ ಮಾಧ್ಯಮ ಯಾವುದೇ ಇರಲಿ, ಜೀವನದ ಮೌಲ್ಯಗಳು ಅಡಕವಾಗಿರುವ ಸಾಹಿತ್ಯವು ಮಾನವನ ಜೀವನಕ್ಕೆ ಮೆರಗು ನೀಡಲು ಸಹಕಾರಿಯಾಗಿದೆ ಎಂದರು. ಆಧುನಿಕ ಸಮಾಜದ ಹಳಿ ತಪ್ಪಿದ ಬದುಕಿಗೆ ಮಾಧ್ಯಮಗಳು ಸಾಹಿತ್ಯಿಕ ಮೌಲ್ಯಗಳೊಂದಿಗೆ ಸಂಸ್ಕಾರವನ್ನು ಮೂಡಿಸುವಂತಾಗಬೇಕು ಎಂದು ಶಿಮಂತೂರು ಆಶಿಸಿದರು.
ಸಾಹಿತ್ಯವು ಲೋಕ ಜೀವನದ ದರ್ಶನವಾಗಿರುವಂತೆಯೇ ವಿಮರ್ಶೆಯೂ ಹೌದೆಂದು ವಿವರಿಸಿದ ಅವರು, ಪ್ರತಿಯೊಂದು ಹೃದಯದಲ್ಲಿ ಸಾಹಿತ್ಯದ ಜೀವಭಾವವಿದೆ.
ಅದು ಅರಳಿ ಹೂವಾಗಿ ಕಂಪನ್ನು ಬೀರಿ ಹಣ್ಣಾಗಬೇಕಾದುದ್ದು ಅತೀ ಅಗತ್ಯ. ಸಾಹಿತಿ ಜೀವನ ಮೌಲ್ಯಗಳನ್ನು ಗೌರವಿಸಿ ಸಾಹಿತ್ಯದಲ್ಲಿ ಅಳವಡಿಸಬೇಕು.
ಪ್ರೀತಿಯನ್ನು ಪ್ರತಿಷ್ಠಾಪಿಸುವ ಸ್ವಯಂ ಪ್ರಭೆ ಇಲ್ಲದ, ಮಾನವೀಯ ಮೌಲ್ಯಗಳು ಶೂನ್ಯವಾದ ಸಾಹಿತ್ಯಗಳಿಗೆ ಬೆಲೆ ಇರದು ಎಂದರು.
ಪ್ರೀತಿಯ ಪುನಃ ಪ್ರತಿಷ್ಟಾಪನೆಯಾಗಲಿ: ಹಿಂಸೆಯೇ ಜನಪ್ರಿಯವಾಗಿರುವ ಈ ಕಾಲ ಘಟ್ಟದಲ್ಲಿ ಎಲ್ಲರ ಹೃದಯದಲ್ಲೂ ಪ್ರೀತಿಯ ಪುನಃ ಪ್ರತಿಷ್ಠಾಪನೆಯಾಗಬೇಕು.
ಕತ್ತಿಯಿಂದ ಬದುಕುವವನು ಕತ್ತಿಯಿಂದಲೇ ಸಾಯುವನು ಎಂಬುವುದನ್ನು ಮನವರಿಕೆ ಮಾಡಿಕೊಂಡು ಪ್ರೀತಿ- ಪ್ರೇಮದ- ಭ್ರಾತೃತ್ವದ ಸೆಲೆ ಹರಿಯುವಂತೆ ಮಾಡುವ, ಸೌಹಾರ್ದತೆಯಿಂದ ಬಾಳುವ ದಾರಿಯನ್ನು ತೋರಿಸುವ ಹೊಣೆಗಾರಿಕೆ ಸಾಹಿತಿಗಿದೆ ಎಂದು ಶಿಮಂತೂರು ಹೇಳಿದರು.
ಭದ್ರ ಸಮಾಜದ ನಿರ್ಮಾಣಕ್ಕೆ, ಅನಂತ ಆನಂದದ ಸ್ಪರ್ಶಕ್ಕೆ ಪ್ರೇರಕವಾಗಿರುವಂತಹ ಸಾಹಿತ್ಯದ ಸೃಷ್ಟಿಯಿಂದ ನಾವೆಂದೂ ದೂರವಾಗಬಾರದೆಂದ ಅವರು, ವಿವಿಧ ಪುಷ್ಪಗಳಿಂದ ಸಂಗ್ರಹಿಸಿದ ಮಧುಪನಿಯನ್ನು ಜೇನು ನೋಣವು ಸಂಸ್ಕರಿಸಿ, ತನ್ನ ಗೂಡೊಳಗಿನಿಂದ ಜೇನನ್ನು ಈವಂತೆ ನಮ್ಮ ಜೀವನಾನುಭವಗಳು ಸಂಸ್ಕರಿಸಲ್ಪಟ್ಟು ಸಾಹಿತ್ಯವಾಗಿ ಪರಿವರ್ತನೆಯಾಗುತ್ತದೆ.
ಹಿಂದಿನ ಅನೇಕ ಹಿರಿಯ ಸಾಹಿತ್ಯಗಳ ಅನುಭವ ಸ್ವೀಕರಿಸಿದಾಗ ನಮ್ಮಿಂದ ಹೊಸ ಸಾಹಿತ್ಯ ಸೃಷ್ಟಿ ಸಾಧ್ಯವೆಂದು ಪ್ರತಿಪಾದಿಸಿದ ಸಮ್ಮೇಳನಾಧ್ಯಕ್ಷಕರು, ಪ್ರಪಂಚವನ್ನು ಸಂಕಷ್ಟದಿಂದ ಪಾರು ಮಾಡುವ ಶಕ್ತಿ ಸಾಹಿತ್ಯಕ್ಕಿದ್ದು, ಈ ಹಿನ್ನೆಲೆಯಲ್ಲಿ ಸಾಹಿತ್ಯ ವಿಶ್ವದೃಷ್ಟಿಯನ್ನು ಒಳಗೊಂಡಿರಬೇಕು ಎಂದರು.