ಹೆರಿಗೆ ವೇಳೆ 2 ಶಿಶುಗಳ ಸಾವು
ಮಂಗಳೂರು: ಪ್ರತ್ಯೇಕ ಘಟನೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಎರಡು ಮಕ್ಕಳು ಮೃತಪಟ್ಟಿದ್ದಾರೆ. ಈ ಬಗ್ಗೆ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿ ಹೊಟ್ಟೆಯಲ್ಲಿ ಒಂದು ಮಗು ಮೃತಪಟ್ಟಿದ್ದರೆ, ಇನ್ನೊಂದು ಮಗು ಹುಟ್ಟಿದ ತಕ್ಷಣ ಸಾವನ್ನಪ್ಪಿದೆ. ಹೆತ್ತವರು ಶಿಶುವಿನ ಅಂತ್ಯಕ್ರಿಯೆ ನಡೆಸಲು ನಂದಿಗುಡ್ಡೆ ಸ್ಮಶಾನಕ್ಕೆ ಕರೆದೊಯ್ದಾಗ 'ಸೂಕ್ತ ದಾಖಲೆ ನೀಡದೆ ಹೂಳಲು ಸಾಧ್ಯವಿಲ್ಲ. ಇದು ಮಸಣಕ್ಕೆ ಬರುತ್ತಿರುವುದು 6ನೇ ಮಗು' ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಇದರಿಂದ ಸಂಶಯಿತರಾದ ಹೆತ್ತವರು ಆಸ್ಪತ್ರೆಗೆ ಬಂದು ಗಲಾಟೆ ಮಾಡಿದ್ದಾರೆ. ಇವರಿಗೆ ಬೆಂಬಲ ನೀಡಿದ ಡಿವೈಎಫ್‌ಐ ಮುಖಂಡರು ಆಸ್ಪತ್ರೆಯಲ್ಲಿ ಅವ್ಯವಸ್ಥೆ ವಿರುದ್ಧ ರಾದ್ಧಾಂತ ಮಾಡಿದ್ದಾರೆ.
ಈ ಸಂದರ್ಭ ಮಗು ಕಳೆದುಕೊಂಡಿರುವ ತಾಯಿಯ ಸಂಬಂಧಿ ಶೋಭಾ ಮಾತನಾಡಿ, 3 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದು, ಸಿಬ್ಬಂದಿ, ವೈದ್ಯರು ನಿರ್ಲಕ್ಷ್ಯ ತೋರಿಸಿದ್ದಾರೆ. ರೋಗಿಯೊಬ್ಬರಿಂದ 7 ಸಾವಿರ ಪಡೆದು ಚಿಕಿತ್ಸೆ ನೀಡಿದ್ದರು. ಹಣ ನೀಡಿದವರಿಗೆ ಮಾತ್ರ ಒಳ್ಳೆ ಚಿಕಿತ್ಸೆ ನೀಡುತ್ತಾರೆ ಎಂದು ಆರೋಪಿಸಿದರು.
ಈ ಬಗ್ಗೆ ಆಸ್ಪತ್ರೆ ಅಧೀಕ್ಷಕಿ ಡಾ.ಶಕುಂತಲಾ ಪ್ರತಿಕ್ರಿಯಿಸಿದ್ದು, ಮಗು ಹೊಟ್ಟೆಯಲ್ಲಿ ಇರುವಾಗಲೇ ಮೃತಪಟ್ಟಿದ್ದು, ವೈದ್ಯರು ಕೈಲಾದ ಪ್ರಯತ್ನ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರತಿದಿನ 20ರಿಂದ 25 ಮಕ್ಕಳು ಹುಟ್ಟುತ್ತವೆ. ಇಲ್ಲಿ ಜಾಗದ, ಸೌಲಭ್ಯ ಕೊರತೆ ಇದೆ. ಆದರೆ ನಮ್ಮ ಎಲ್ಲ ಪ್ರಯತ್ನ ಮಾಡಿ ಹೆರಿಗೆ ಸಸೂತ್ರವಾಗಿ ಮಾಡುವಂತೆ ನೋಡಿಕೊಳ್ಳುತ್ತೇವೆ. ಆದರೂ ಕೆಲವು ತೊಂದರೆಯಿಂದ ಮಕ್ಕಳು ಮೃತಪಡುತ್ತವೆ, ಇನ್ನು ಕೆಲವು ಗರ್ಭಿಣಿ ಪೋಷಣೆ ಕೊರತೆಯಿಂದ ಮಕ್ಕಳ ಬೆಳವಣಿಗೆಯಾಗದೆ ಮೃತಪಡುತ್ತವೆ ಎಂದು ತಿಳಿಸಿದ್ದಾರೆ.