ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕನ್ನಡ ಅನುಷ್ಠಾನ ನಿರ್ಣಯ ಈಗ ಅನಗತ್ಯ!

Mainashree
Updated On : 3 Feb 2013, 11:45 am

ಆತ್ಮಭೂಷಣ್
ಮಂಗಳೂರು: ಪ್ರತಿ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗಲೂ ಕನ್ನಡ ಅನುಷ್ಠಾನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಠರಾವು ಮಂಡಿಸುವುದು ಮಾಮೂಲು. 2010ರಲ್ಲಿ ಮಂಗಳೂರು ಪುರಭವನದಲ್ಲಿ ನಡೆದ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಬಳಿಕ ಕನ್ನಡ ಅನುಷ್ಠಾನ ಕುರಿತು ಠರಾವು ಮಂಡನೆಯನ್ನು ಕೈಬಿಟ್ಟಿದೆ.
 ಯಾಕೆಂದರೆ ಕನ್ನಡ ಅನುಷ್ಠಾನ ಬಗ್ಗೆ ರಾಜ್ಯ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಗಮನಾರ್ಹವಾಗಿ ಕಾರ್ಯನಿರ್ವಹಿಸಲು ಮುಂದಾಗಿರುವ ಹಿನ್ನಲೆಯಲ್ಲಿ ಇಂಥ ನಿರ್ಣಯ ಇನ್ನು ಅಗತ್ಯವಿಲ್ಲ ಎಂಬ ಕಾರಣಕ್ಕೆ ಪರಿಷತ್ತು ಕೈಬಿಟ್ಟಿದೆ.
ಈ ವಿಚಾರವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಖಚಿತಪಡಿಸಿದ್ದು, ಕನ್ನಡದ ವಿಚಾರಕ್ಕೆ ಕುತ್ತು ಬಂದಾಗ ಮತ್ತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂಬ ಸುಳಿವನ್ನು ನೀಡಲು ಮರೆಯಲಿಲ್ಲ.
ಠರಾವುಗಳೂ ಅಷ್ಟಕ್ಕಷ್ಟೆ: ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡು-ನುಡಿ ಏಳ್ಗೆಗಾಗಿ ಮಂಡಿಸಿ ಅಂಗೀಕಾರ ಪಡೆಯುವ ನಿರ್ಣಯಗಳಿಗೆ ಲೆಕ್ಕವಿಲ್ಲ. ಅದೆಷ್ಟೋ ನಿರ್ಣಯಗಳು ಮುಂದಿನ ಸಮ್ಮೇಳನ ವೇಳೆ ಹೇಳಹೆಸರಿಲ್ಲದೆ ಮೂಲೆ ಸೇರುತ್ತವೆ. ಈ ಠರಾವು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತವೆ ಎಂದರೆ ಅಷ್ಟಕ್ಕಷ್ಟೆ ಎನ್ನಬೇಕು.
ಜಿಲ್ಲೆಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ನಡೆದು, ಈಗ ಉಪ್ಪಿನಂಗಡಿಯಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮುಕ್ತಾಯಗೊಂಡಿದೆ. ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ಆಗಿಲ್ಲ, ಈ ಸಮ್ಮೇಳನದಲ್ಲಿ ಕೃಷಿ, ಪರಿಸರ, ತಂತ್ರಜ್ಞಾನ ಕುರಿತತಿವಿಧ 11 ನಿರ್ಣಯ ಕೈಗೊಳ್ಳಲಾಗಿದೆ.
ಈಡೇರಿದ್ದು ಎಷ್ಟು?: ಈ ಹಿಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳಲಾದ ನಿರ್ಣಯಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿಗೆ ಕಳುಹಿಸಲಾಗುತ್ತದೆ. ಪರಿಷತ್ತು ಅಲ್ಲಿಂದ ಸರ್ಕಾರಕ್ಕೆ ರವಾನಿಸುತ್ತದೆ. ಆದರೆ ನಿರ್ಣಯ ಮಾತ್ರ ಸುಲಭದಲ್ಲಿ ಜಾರಿಯಾಗುವುದಿಲ್ಲ.
ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನ ಅಕಾಡೆಮಿ, ಬ್ಯಾರಿ ಅಕಾಡೆಮಿ ಸ್ಥಾಪನೆ, ಅಬ್ಬಕ್ಕ ಪ್ರತಿಮೆ ಅನಾವರಣ, ಕನ್ನಡ ಅನುಷ್ಠಾನಕ್ಕೆ ಸರ್ಕಾರಿ ವ್ಯವಸ್ಥೆಗೆ ಬೇಡಿಕೆಗೆ ಸ್ಪಂದನ ಸಿಕ್ಕಿದೆ. ಇದು ಬಿಟ್ಟರೆ ಬೇರಾವ ಬೇಡಿಕೆಗೂ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸರ್ಕಾರ ತಲೆಕೆಡಿಸಿಕೊಂಡಿಲ್ಲ.
ಸಮರ್ಪಕ ಅನುಷ್ಠಾನ ಯಾವಾಗ?: ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲಾ ಸಮ್ಮೇಳನಗಳಲ್ಲಿ ಮಂಗಳೂರನ್ನು ಪ್ರತ್ಯೇಕ ರೇಲ್ವೆ ವಲಯ ಎಂದು ಪರಿಗಣಿಸುವಂತೆ ಆಗ್ರಹಿಸಲಾಗಿತ್ತು. ಗ್ರಾಮೀಣ ಪ್ರದೇಶಗಳಿಗೆ ಸರಿಯಾಗಿ ರಸ್ತೆ, ನೀರು ಸೌಲಭ್ಯಕ್ಕೆ ಒತ್ತಾಯಿಸಿತ್ತು. ಈ ಬೇಡಿಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ, ಹಾಗಾಗಿ ಮತ್ತೆ ಇದೇ ನಿರ್ಣಯಗಳು ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಮರುಕಳಿಸುವ ಸಂಭವ ಇದೆ.
ಇದಲ್ಲದೆ ನದಿ ತಿರುವು ಯೋಜನೆಯ ಸ್ಪಷ್ಟ ನಿಲವು ಹೊರಬಿದ್ದಿಲ್ಲ. ನಗರದಲ್ಲಿ ಕನ್ನಡ ಭವನ ನಿರ್ಮಾಣ, ಪರಿಷತ್ತಿನ ಚಟುವಟಿಕೆಗೆ ಸರ್ಕಾರಿ ಜಾಗ ಒದಗಿಸುವುದು ಈ ಪ್ರಮುಖ ನಿರ್ಣಯಗಳು ಕಡತದಲ್ಲೇ ಉಳಿದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement