ನೀರಿನ ಸಮಸ್ಯೆಗೆ ತುರ್ತು ಪರಿಹಾರ ಕೊಠಡಿ
ಮಂಗಳೂರು: ಮಂಗಳೂರು ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕೆಲವು ಜನವಸತಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ತುರ್ತು ಪರಿಹಾರಕ್ಕಾಗಿ ಜಲನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ನೀರಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ವಾಸ್ತವ್ಯವಿರುವ ಸಾರ್ವಜನಿಕರು ಕಾರ್ಯನಿರ್ವಾಹಕ ಅಧಿಕಾರಿ 0824-2423675, 9480862110 ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 0824-2423623, 9480862113ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೂಲ್ಕಿ: ಇಂದು ಮಹಾವಿಷ್ಣು ಯಾಗ ಸಮಾಪನ
ಮೂಲ್ಕಿ: ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಜರಗುತ್ತಿರುವ ಮಹಾವಿಷ್ಣು ಯಾಗವು ಭಾನುವಾರ ಸಮಾಪನಗೊಳ್ಳಲಿದೆ. ಬೆಳಗ್ಗೆ ಮೂಲ್ಕಿ ಪೇಟೆಯಿಂದ ಜನರು ಲಿಖಿತ ಜಪಯಜ್ಞ ಪುಸ್ತಕದೊಂದಿಗೆ ಶೋಭಾ ಯಾತ್ರೆ ಮೂಲಕ ಯಜ್ಞಾ ಮಂಟಪಕ್ಕೆ ಶ್ರೀ ದೇವರ ಆಗಮನವಾಗಲಿದ್ದು, ಬಳಿಕ ಮಹಾವಿಷ್ಣು ಯಾಗಾಂಗ, ಸಂಖ್ಯಾಪೂರ್ತಿ ಪವಮಾನ ಹವನ, ಹರೇ ರಾಮ ಹರೇ ಕೃಷ್ಣ ಮಹಾಮಂತ್ರ, ಲಿಖಿತ ಜಪ ಯಜ್ಞ ಪುಸ್ತಕ ವಿಶೇಷ ಪೂಜೆ ಮತ್ತು ಸಮರ್ಪಣೆ, ಮಹಾ ಪೂರ್ಣಾಹುತಿ, ದರ್ಶನ ಸೇವೆ, ಭೂರಿ ಸಮಾರಾಧನೆ, ರಾತ್ರಿ ದೀಪಾರಾಧನೆ, ಸಣ್ಣ ರಥೋತ್ಸವ, ಭಂಡಿ ಗರುಡೋತ್ಸವ, ವಸಂತ ಪೂಜೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಆಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆ
ಉಪ್ಪಿನಂಗಡಿ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಚಲ್ಲ ಎಂಬವರ ಪತ್ನಿ ಲಕ್ಷ್ಮೀ (50) ಎಂಬವರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮನೆಯಿಂದ ಸೊಪ್ಪು ತರಲೆಂದು ಪಕ್ಕದ ಕಾಡಿಗೆ ತೆರಳಿದ್ದ ಅವರು ಅಲ್ಲಿಯೇ ರಬ್ಬರ್ ಶೀಟ್ ತಯಾರಿಕೆ ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಕೂಡಲೆ ಪ್ರಥಮ ಚಿಕಿತ್ಸೆ ಕೊಡಿಸಿ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇವರು ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಲಾರಿ, ಬೈಕ್ ಡಿಕ್ಕಿ: ಓರ್ವ ಸಾವು
ಬೆಳ್ತಂಗಡಿ: ಉಜಿರೆಯ ಎರ್ನೋಡಿ ಸೇತುವೆ ಬಳಿ ಶನಿವಾರ ರಾತ್ರಿ ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಅಶೋಕ್ ಲಾಯಿಲ (25) ಮೃತಪಟ್ಟಿದ್ದಾರೆ. ಸಹಸವಾರ ನಾಗೇಶ್ ಗಂಭೀರ ಗಾಯಗೊಂಡಿದ್ದಾರೆ. ಇದರಿಂದ ಉಜಿರೆ ಬೆಳ್ತಂಗಡಿ ಮುಖ್ಯ ರಸ್ತೆ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
ಪತಿ ನಾಪತ್ತೆ: ದೂರು
ಮಂಗಳೂರು: ಪಾಂಡೇಶ್ವರದ ಪ್ರಕಾಶ್ (50) ಜ.31ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ಸುಚೇತಾ ಕೈರಂಗಳ ಅಂಬರ ವ್ಯಾಲಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಸೌಖ್ಯ ನಿಮಿತ್ತ ಪ್ರಕಾಶ್ ಕೆಲಸ ಮಾಡದೆ ಮನೆಯಲ್ಲಿಯೇ ಇರುತ್ತಿದ್ದರು. ಸುಚೇತಾ ಗುರುವಾರ ಕೆಲಸಕ್ಕೆ ಹೋಗಿದ್ದು, ವಾಪಸ್ ಬರುವಾಗ ಪ್ರಕಾಶ್ ನಾಪತ್ತೆಯಾಗಿದ್ದರು. ಕಪಾಟ್ನಲ್ಲಿದ್ದ 4 ಸಾವಿರ, ಪ್ರಕಾಶ್ ಸೇವಿಸುತ್ತಿದ್ದ ಮಾತ್ರೆಗಳು, ಮೊಬೈಲ್ ಕೂಡಾ ಕಾಣೆಯಾಗಿದೆ. ಪ್ರಕಾಶ್ ಒಯ್ದಿರಬೇಕು ಎಂದು ಶಂಕಿಸಲಾಗಿದೆ. ಪಾಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೈಕ್-ಆಟೋ ಡಿಕ್ಕಿ: ಇಬ್ಬರಿಗೆ ಗಾಯ
ವಿಟ್ಲ: ಆಟೋ ರಿಕ್ಷಾ ಹಾಗೂ ಬೈಕ್ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಹಾಗೂ ಜೊತೆಗಿದ್ದ ಮಗುವೊಂದು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ- ಮಂಗಳೂರು ರಸ್ತೆಯ ಕೆಲಿಂಜ ಸಮೀಪ ಶನಿವಾರ ಸಂಜೆ ನಡೆದಿದೆ.
ಗಾಯಗೊಂಡವರನ್ನು ವಿಟ್ಲ ನಿವಾಸಿಗಳಾದ ಅಬ್ದುಲ್ಲ(36) ಹಾಗೂ ರುಕ್ಸಾನ್(13) ಎಂದು ಗುರುತಿಸಲಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಲ್ಲಡ್ಕ ಕಡೆಯಿಂದ ವಿಟ್ಲ ಕಡೆ ತೆರಳುತ್ತಿದ್ದ ಆಟೋ ರಿಕ್ಷಾ ಕೆಲಿಂಜ ಸಮೀಪ ಬಲ ಕಡೆಗೆ ತಿರುಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ರುಕ್ಸಾನ್ ಅವರ ಕಾಲಿಗೆ ಹಾಗೂ ಅಬ್ದುಲ್ಲ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.