'ವಿವಾದ ಸೃಷ್ಟಿ ಕಾಂಗ್ರೆಸ್, ಬಿಜೆಪಿ ಆಂತರಿಕ ಒಪ್ಪಂದ'
ಮಂಗಳೂರು: 'ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರನ್ನು ಇಡುವ ವಿವಾದ ಕಾಂಗ್ರೆಸ್ ಮತ್ತು ಬಿಜೆಪಿ ಆಂತರಿಕ ಒಪ್ಪಂದವಾಗಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಶನಿವಾರ ನಡೆದ ಜೆಡಿಎಸ್ ಮಹಿಳಾ ಮತ್ತು ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವವಿದ್ಯಾಲಯಕ್ಕೆ ಟಿಪ್ಪು ಹೆಸರನ್ನು ಪ್ರಸ್ತಾಪಿಸಲು ಹೊರಟಿರುವುದು ಸರ್ಕಾರವೇ ಹೊರತು ಅಲ್ಪಸಂಖ್ಯಾತರಲ್ಲ. ಯುವಕರಿಗೆ ಗುಣಾತ್ಮಕದ ಶಿಕ್ಷಣದ ಅಗತ್ಯವಿದೆ. ಇವುಗಳನ್ನು ನೀಡುವುದರ ಬದಲು ವಿವಾದಾತ್ಮಕ ಹೇಳಿಕೆಗಳನ್ನು ಸೃಷ್ಟಿಸಿ ಗಲಭೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದ ಇತಿಹಾಸದಲ್ಲಿ ಕೆಟ್ಟ ಆಡಳಿತ ನೀಡಿದ ಪಕ್ಷ ಬಿಜೆಪಿ. ಶಾಸಕರು ವೈಯುಕ್ತಿಕ ವಿಚಾರಗಳಲ್ಲಿ ಕಿತ್ತಾಡುತ್ತಿದ್ದು, ಜನತೆ ಕಡೆ ಗಮನಹರಿಸುತ್ತಿಲ್ಲ. ಸರ್ಕಾರದ ಖಜಾನೆ ಲೂಟಿ ಮಾಡುವ ಕಾರ್ಯನಿರ್ವಹಿಸಿದ್ದಾರೆ ಎಂದರು.
ಬಿಜೆಪಿ ಪಕ್ಷದ ಓಟವನ್ನು ತಡೆಯಲಾಗದೆ ಕಾಂಗ್ರೆಸ್ ಪಕ್ಷ ಗುಜಾರಾತನ್ನು ಮೋದಿಗೆ ಮಾರಾಟ ಮಾಡಿದೆ. ಹಾಗೆಯೇ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹಗರಣವನ್ನು ಜೆಡಿಎಸ್ ಬಯಲಿಗೆಳೆಯದಿದ್ದರೆ, ಕಾಂಗ್ರೆಸ್ ಕರ್ನಾಟಕವನ್ನು ಅವರ ಕಾಲಬುಡಕ್ಕೆ ಇಡುತ್ತಿದ್ದರು. ಬಿಜೆಪಿಯ ದುರಾಡಳಿತದ ನಾಗಾಲೋಟಕ್ಕೆ ತಡೆ ಹಾಕಿದ್ದು ಜೆಡಿಎಸ್ ಎಂದು ಹೇಳಿದರು.
ಸಮಾಜದ ಎರಡು ಸಮುದಾಯದ ನಡುವೆ ಸಂಘರ್ಷದ ಕಂದಕ ಸೃಷ್ಟಿಯಾಗಲು ಎರಡು ರಾಷ್ಟ್ರೀಯ ಪಕ್ಷ ಕಾರಣವಾಗಿದೆ. ಆದರೆ ಈಗ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮರಸ್ಯದ ನೆಪದಲ್ಲಿ ನೈತಿಕತೆ ಇಲ್ಲದೆ ಜನರ ಬಳಿಗೆ ಪಾದೆಯಾತ್ರೆ ಕೈಗೊಂಡಿದ್ದಾರೆ ಎಂದರು.
ಮಧ್ಯಮವರ್ಗದವರು ಉಪಯೋಗ ಮಾಡುತ್ತಿರುವ ದವಸಧಾನ್ಯ, ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಿ, ಕೆಟ್ಟ ಆರ್ಥಿಕ ನೀತಿಯನ್ನು ಕೊಡುತ್ತಿರುವ ಕಾಂಗ್ರೆಸ್ ನಾಯಕರು ಸಾಮರಸ್ಯವನ್ನು ಹಾಳುಗೆಡವಿರುವ ಪಿತಾಮಹರಾಗಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಪ್ರಣಾಳಿಕೆ: ಜೆಡಿಎಸ್ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ವೃದ್ಯಾಪ್ಯ ಮತ್ತು ವಿಧವೆಯರ ತಿಂಗಳ ವೇತನವನ್ನು ರು. 1,500ಕ್ಕೆ ಏರಿಕೆ ಮಾಡಲಾಗುತ್ತದೆ. ಇದೇ ಹಣವು ಮದುವೆಯಾಗದೆ ಉಳಿದಿರುವ ಹೆಣ್ಣುಮಕ್ಕಳಿಗೂ ನೀಡಲಾಗುತ್ತದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರರಿಗೆ ಆರ್ಥಿಕವಾಗಿ ನೆರವು ನೀಡುವಂಥ ಕಾರ್ಯಕ್ರಮವನ್ನು ಪ್ರಣಾಳಿಕೆಯಲ್ಲಿ ಸಿದ್ಧಪಡಿಸಲಾಗಿದ್ದು, ಚುನಾವಣೆ ಸಂದರ್ಭ ತಿಳಿಸುವುದಾಗಿ ಹೇಳಿದರು.
ಸಭೆಯಲ್ಲಿ ಪಕ್ಷದ ಚುನಾವಣಾ ಅಭ್ಯರ್ಥಿ ಎ. ಸದಾನಂದ ಶೆಟ್ಟಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಎಸ್. ಹೆಗ್ಡೆ, ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ.ಬಿ. ಸದಾಶಿವ, ರಾಜ್ಯ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಜೆಡಿಎಸ್ ಸದಸ್ಯೆ ರಾಜಶ್ರೀ ಇದ್ದರು.