ಕನ್ನಡ ಶಾಲೆ ಮುಚ್ಚುವುದು ಪರಿಹಾರವಲ್ಲ: ಮುಖ್ಯಮಂತ್ರಿ ಚಂದ್ರು
ಸುಳ್ಯ: ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವುದು ಯಾವುದಕ್ಕೂ ಪರಿಹಾರವಲ್ಲ. ಅದರ ಬದಲು ಮುಚ್ಚಲು ಕಾರಣವಾಗುವಂತಹ ಕಾರಣಗಳನ್ನು ಹುಡುಕಿ ಅವುಗಳಿಗೆ ಪರಿಹಾರ ಹುಡುಕಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಕೊರತೆ ನೀಗಿಸುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಕಂಪ್ಯೂಟರ್ ಶಿಕ್ಷಣ ಕೊಡಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸಾವಿರಾರು ಕೋಟಿ ಬಜೆಟ್ ಇರುವ ಶಿಕ್ಚಣ ಇಲಾಖೆಯಲ್ಲಿ ಪ್ರಾಧಿಕಾರ ಹಸ್ತಕ್ಷೇಪ ಮಾಡಲಾಗುವುದಿಲ್ಲ. ಸರ್ಕಾರ ನಮ್ಮ ಕೈಯಲ್ಲಿ ಚಾಟಿ ಕೊಟ್ಟಿದೆ. ಆದರೆ, ಅದನ್ನು ಬೀಸಲು ಶಕ್ತಿ ಕೊಟ್ಟಿಲ್ಲ ಎಂದು ಹೇಳಿದರು.
ಉದಾಸೀನದ ಭಾವನೆಯಿಂದಲೇ ಕನ್ನಡಕ್ಕೆ ಧಕ್ಕೆ ಬಂದಿದೆ. ಯಾವ ಮಾತೃಭಾಷೆಯಾದರೂ ಅದು ಅವರ ಬದುಕಿನ ಭಾಷೆ, ಸಂಸ್ಕೃತಿಯ ಭಾಷೆ ಹಾಗಾಗಿ ಪ್ರಾದೇಶಿಕ ಭಾಷೆಗಳನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನ ವಿಶೇಷ ಉಪನ್ಯಾಸ ನೀಡಿದರು. ಕನ್ನಡದ ಬಗ್ಗೆ ಮಾತನಾಡುವ ಸಾಹಿತಿಗಳು, ಕಲಾವಿದರು ಕನ್ನಡ ಶಾಲೆಗಳಿಗೆ ಹೋಗಿ ಸ್ಫೂರ್ತಿ ತುಂಬಬೇಕು. ಚಳುವಳಿಯ ರೂಪದಲ್ಲಿ ಇದನ್ನು ಮಾಡಿದಾಗ ಮಾತ್ರ ಕನ್ನಡತನ ಉಳಿಯುತ್ತದೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ ಇದ್ದರು. ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ. ವಿದ್ಯಾ ಶಾಂಭವ ಪಾರೆ ವಂದಿಸಿದರು. ಇದಕ್ಕೂ ಮೊದಲು ಆಶಾ ನಾಯಕ್ ಉಡುಪಿ ಇವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.