ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡ್ರಗ್ಸ್‌ಗೆ ಬಲಿಯಾದ ವಿದ್ಯಾರ್ಥಿನಿ

Lingaraj Badiger
Updated On : 4 Feb 2013, 12:48 pm

ಮಂಗಳೂರು: ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹೊರಬರಲಾಗದೆ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ, ಪದವಿನಂಗಡಿಯ ಸ್ನೇಹಾ (18) ಆತ್ಮಹತ್ಯೆ ಮಾಡಿಕೊಂಡವಳು. ಭಾನುವಾರ ಬೆಳಗ್ಗಿನ ಜಾವ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಹೆತ್ತವರಿಗೆ ತಿಳಿದು ಬಂತು. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಟ ಹತ್ತಿಸಿಕೊಂಡಿದ್ದಳು: ನಗರದ ಬೋಂದೆಲ್‌ನ ಪ್ರೌಢಶಾಲೆಗೆ ಹೋಗುವ ಸಂದರ್ಭ 15ನೇ ವರ್ಷದಲ್ಲೇ ಈಕೆ ಮಾದಕ ದ್ರವ್ಯ ಸೇವನೆ ಚಟಕ್ಕೆ ತುತ್ತಾದಳು. ಚುಚ್ಚುಮದ್ದು ಮೂಲಕ ಡ್ರಗ್ಸ್ ಸೇವನೆಯಿಂದ ಹಿಡಿದು, ಮದ್ಯ, ಗುಟ್ಕಾ, ತಂಬಾಕು ಕೂಡಾ ಬಿಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಆಕೆ ಮೇಲೆ ಕಣ್ಣಿಟ್ಟಿದ್ದೆವು:  ಪಿಯುಸಿ ಅಭ್ಯಾಸ ವೇಳೆ ಆಕೆ ಸಂಶಯಾಸ್ಪದ ನಡವಳಿಕೆಯಿಂದಾಗಿ ಆಕೆ ಜೀವನಶೈಲಿ, ದಿನ ನಿತ್ಯ ಚಲನವಲನಗಳ ಮೇಲೆ ಕಣ್ಣಿಟ್ಟೆವು. ಆಕೆ ಸಂಪೂರ್ಣವಾಗಿ ಮಾದಕ ದ್ರವ್ಯ ಸೇವನೆಗೆ ದಾಸಳಾಗಿರುವುದು ಗೊತ್ತಾಯಿತು. ಇದರಿಂದ ಹೊರತರಲು ಕಂಕನಾಡಿ ಫಾದರ್‌ಮುಲ್ಲರ್ಸ್ ಆಸ್ಪತ್ರೆ ವೈದ್ಯರ ಸಲಹೆಯಂತೆ ಫೆಬ್ರವರಿಯಲ್ಲಿ ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ 2 ತಿಂಗಳ ಕಾಲ ಚಿಕಿತ್ಸೆ ನೀಡಿದೆವು. ತಿಂಗಳಿಗೆ 20 ಸಾವಿರದಂತೆ ಖರ್ಚು ಮಾಡಿದೆವು. ಶೇ.60 ಗುಣಮುಖಳಾಗಿದ್ದಳು. ಬಳಿಕ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಮಗಳ ಸಾವಿನ ಬಗ್ಗೆ ಕಣ್ಣೀರು ತುಂಬಿಕೊಂಡು ತಾಯಿ ಸುನೀತಾ ಉಪಾಧ್ಯಾಯ ಹೇಳಿದ್ದಾರೆ.
ದುಡ್ಡು ಕೇಳಿದ್ದಳು: ಶನಿವಾರ ರಾತ್ರಿ ಮಗಳು 1,500 ಕೇಳಿದಳು. ಈ ತಿಂಗಳ ಕೊನೆಯಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದಳು. ನಿರಾಕರಿಸಿದಾಗ ಸಿಟ್ಟುಗೊಂಡ ಆಕೆ ಕೋಣೆಗೆ ಬಾಗಿಲು ಹಾಕಿದಳು. ರಾತ್ರಿ ಇಡೀ ಲೈಟ್ ಹಾಕಿಕೊಂಡೇ ಇತ್ತು.
  ಮಧ್ಯರಾತ್ರಿ 1 ಗಂಟೆ ವರೆಗೆ ನೋಡಿದಾಗ ಫ್ಯಾನ್ ತಿರುಗುತ್ತಲೇ ಇತ್ತು. ಆದರೆ ಬೆಳಗ್ಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಆಕೆ ಫ್ಯಾನ್‌ಗೆ ನೇಣುಹಾಕಿಕೊಂಡಿರುವುದು ಕಂಡು ಬಂತು.
ಈ ಹಿಂದೆ ಪೊಲೀಸರಿಗೆ ದೂರು ಕೊಡಬೇಕು ಎಂದು ಅನೇಕ ಬಾರಿ ಪ್ರಯತ್ನಿಸಿದೆವು. ಆದರೆ ಆಗಲಿಲ್ಲ. ಆಕೆ ಮನೆಯಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಬಜರಂಗದಳ ಸಂಘಟನೆಯವರು ಪತ್ತೆ ಹಚ್ಚಿ ಕೊಟ್ಟು ನೆರವು ನೀಡಿದರು. ಇತ್ತೀಚೆಗೆ ನಾಪತ್ತೆಯಾದಾಗ ಮಣಿಪಾಲ ಎಂಡ್ ಪಾಯಿಂಟ್‌ನಲ್ಲಿ ಆಕೆಯನ್ನು ಬಜರಂಗದಳದವರು ಪತ್ತೆ ಮಾಡಿದರು ಎಂದು ತಾಯಿ ಸುನೀತಾ ಹೇಳುತ್ತಾರೆ.
ಗೃಹಬಂಧನ-ದೂರು: ಮಣಿಪಾಲದಲ್ಲಿ ಪತ್ತೆಯಾದ ಬಳಿಕ ಮನೆಯಿಂದ ಹೊರ ಹೋಗಲು ಬಿಡಲಿಲ್ಲ. ಹೆತ್ತವರು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಪೊಲೀಸರಿಗೆ, ಮಕ್ಕಳ ಹಕ್ಕು ಕಲ್ಯಾಣ ಸಮಿತಿಗೆ ಆಕೆ ದೂರು ನೀಡಿದ್ದಳು. ಆಗ ಆಕೆಗೆ ಚಿಕಿತ್ಸೆ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿ ಸಲಹೆ ಮಾಡಿತ್ತು.
9ನೇ ತರಗತಿ ವರೆಗೆ ವಿದ್ಯಾಭ್ಯಾಸದಲ್ಲಿ ಶಾಲೆಗೆ ಆಕೆಯೇ ನಂಬರ್ ವನ್. ಬಳಿಕ ಆಕೆ ಕಲಿಕೆಯಲ್ಲಿಹಿಂದೆ ಬಿದ್ದಳು. ಆಕೆ ತರಗತಿ ಬಂಕ್ ಮಾಡಿ ಡಿಜೆಗಳಿಗೆ ಹೋಗುತ್ತಿದ್ದಳು ಎಂದು ತಂದೆ ಗುರುರಾಜ್ ಹೇಳುತ್ತಾರೆ. ಆಕೆಗೆ ಗೆಳಯರೂ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮನೆಯಿಂದ ಹಣ ಪಡೆದು ಗೆಳೆಯರ ಬಳಗ ಪ್ರತಿ ನಿತ್ಯ ಪಬ್‌ಗಳಿಗೆ ಹೋಗುತ್ತಿದ್ದರು. ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಆದರೆ ಉಳಿದವರೂ ಮಕ್ಕಳನ್ನು ಕಳೆದುಕೊಳ್ಳುವ ಮುನ್ನ ಜಾಗೃತರಾಗಲಿ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ವಿನಂತಿಸಿದ್ದಾರೆ ಅವರು.

ಕಠಿಣ ಕ್ರಮ: ಸಿ.ಟಿ.ರವಿ
ಡ್ರಗ್ಸ್ ಮಾಫಿಯಾದಿಂದ ವಿದ್ಯಾರ್ಥಿಗಳು ಬದುಕು ಕಳೆದುಕೊಳ್ಳುತ್ತಿರುವ ವಿಚಾರದ ಬಗ್ಗೆ ಚಿಂತೆ ಹೊರಗೆಡಹಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ, ಕಾವೂರು ಪೊಲೀಸ್ ಠಾಣಾಧಿಕಾರಿ ಜತೆ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ತಡೆಗಟ್ಟಲು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಐಜಿಪಿ ಜತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.

ಬಜರಂಗದಳ ಸವಾಲು
ಬಜರಂಗದಳ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಮಾದಕ ಪಾರ್ಟಿ, ಡಿಜೆಗಳನ್ನು ತಡೆಯಲು ಯತ್ನಿಸುತ್ತಿದೆ. ಆದರೆ ಸ್ವಯಂಘೋಷಿತ ಬುದ್ಧಿಜೀವಿಗಳ ಕೆಲ ವರ್ಗ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಬಜರಂಗದಳಕ್ಕೆ ಕೆಲಸ ಇಲ್ಲ ಎಂದು ದೂಷಿಸುವವರು ಸ್ನೇಹಾಳ ಮನೆಗೆ ಒಮ್ಮೆ ಭೇಟಿ ನೀಡಲಿ ಎಂದು ಬಜರಂಗದಳ ವಿಭಾಕ ಸಂಚಾಲಕ ಶರಣ್ ಪಂಪ್‌ವೆಲ್ ಸವಾಲು ಹಾಕಿದ್ದಾರೆ.
 ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೆ ಹೋದರೆ ಬಜರಂಗದಳ ಸಮಾಜದ ರಕ್ಷಣೆಗೆ, ಹೆತ್ತವರ ಕಣ್ಣೀರು ಒರೆಸಲು, ಇಂಥ ಘಟನೆಗಳು ನಡೆಯದಿರಲು ಡ್ರಗ್ಸ್ ಮಾಫಿಯಾ ವಿರುದ್ಧ ನೇರವಾಗಿ ಹೋರಾಡಲಿದೆ ಎಂದು ಬಜರಂಗದಳ ಸುರಕ್ಷಾ ಪ್ರಮುಖ್ ಪುನೀತ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement