ವಿದ್ಯಾರ್ಥಿನಿಯನ್ನು ಆತ್ಮಹತ್ಯೆ ಕೂಪಕ್ಕೆ ತಳ್ಳಿದ ಡ್ರಗ್ಸ್
ಮಂಗಳೂರು: ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹೊರಬರಲಾಗದೆ ಮಂಗಳೂರಿನ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಗರದ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ, ಪದವಿನಂಗಡಿಯ ಸ್ನೇಹಾ(18) ಆತ್ಮಹತ್ಯೆ ಮಾಡಿಕೊಂಡವಳು. ಭಾನುವಾರ ಬೆಳಗಿನ ಜಾವ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಹೆತ್ತವರಿಗೆ ತಿಳಿದು ಬಂತು. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಗರದ ಬೋಂದೆಲ್ನ ಪ್ರೌಢಶಾಲೆಗೆ ಹೋಗುವ ಸಂದರ್ಭ 15ನೇ ವರ್ಷದಲ್ಲೇ ಈಕೆ ಮಾದಕ ದ್ರವ್ಯ ಸೇವನೆ ಚಟಕ್ಕೆ ತುತ್ತಾದಳು. ಚುಚ್ಚುಮದ್ದು ಮೂಲಕ ಡ್ರಗ್ಸ್ ಸೇವನೆಯಿಂದ ಹಿಡಿದು, ಮದ್ಯ, ಗುಟ್ಕಾ, ತಂಬಾಕು ಕೂಡಾ ಬಿಡುತ್ತಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ಆಕೆ ಮೇಲೆ ಕಣ್ಣಿಟ್ಟಿದ್ದೆವು: ಪಿಯುಸಿ ಅಭ್ಯಾಸ ವೇಳೆ ಆಕೆ ಸಂಶಯಾಸ್ಪದ ನಡವಳಿಕೆಯಿಂದಾಗಿ ಆಕೆ ಜೀವನಶೈಲಿ, ದಿನ ನಿತ್ಯ ಚಲನವಲನಗಳ ಮೇಲೆ ಕಣ್ಣಿಟ್ಟೆವು. ಆಕೆ ಸಂಪೂರ್ಣವಾಗಿ ಮಾದಕ ದ್ರವ್ಯ ಸೇವನೆಗೆ ದಾಸಳಾಗಿರುವುದು ಗೊತ್ತಾಯಿತು. ಇದರಿಂದ ಹೊರತರಲು ಕಂಕನಾಡಿ ಫಾದರ್ಮುಲ್ಲರ್ಸ್ ಆಸ್ಪತ್ರೆ ವೈದ್ಯರ ಸಲಹೆಯಂತೆ ಫೆಬ್ರವರಿಯಲ್ಲಿ ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ 2 ತಿಂಗಳ ಕಾಲ ಚಿಕಿತ್ಸೆ ನೀಡಿದೆವು. ತಿಂಗಳಿಗೆ 20 ಸಾವಿರದಂತೆ ಖರ್ಚು ಮಾಡಿದೆವು. ಶೇ.60 ಗುಣಮುಖಳಾಗಿದ್ದಳು. ಬಳಿಕ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಮಗಳ ಸಾವಿನ ಬಗ್ಗೆ ಕಣ್ಣೀರು ತುಂಬಿಕೊಂಡು ತಾಯಿ ಸುನೀತಾ ಉಪಾಧ್ಯಾಯ ಹೇಳಿದ್ದಾರೆ.
ದುಡ್ಡು ಕೇಳಿದ್ದಳು: ಶನಿವಾರ ರಾತ್ರಿ ಮಗಳು 1,500 ಕೇಳಿದಳು. ಈ ತಿಂಗಳ ಕೊನೆಯಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದಳು. ನಿರಾಕರಿಸಿದಾಗ ಸಿಟ್ಟುಗೊಂಡ ಆಕೆ ಕೋಣೆಗೆ ಬಾಗಿಲು ಹಾಕಿದಳು. ರಾತ್ರಿ ಇಡೀ ಲೈಟ್ ಹಾಕಿಕೊಂಡೇ ಇತ್ತು. ಮಧ್ಯರಾತ್ರಿ 1 ಗಂಟೆ ವರೆಗೆ ನೋಡಿದಾಗ ಫ್ಯಾನ್ ತಿರುಗುತ್ತಲೇ ಇತ್ತು. ಆದರೆ ಬೆಳಗ್ಗೆ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಆಕೆ ಫ್ಯಾನ್ಗೆ ನೇಣುಹಾಕಿಕೊಂಡಿರುವುದು ಕಂಡು ಬಂತು. ಈ ಹಿಂದೆ ಪೊಲೀಸರಿಗೆ ದೂರು ಕೊಡಬೇಕು ಎಂದು ಅನೇಕ ಬಾರಿ ಪ್ರಯತ್ನಿಸಿದೆವು. ಆದರೆ ಆಗಲಿಲ್ಲ. ಆಕೆ ಮನೆಯಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಬಜರಂಗದಳ ಸಂಘಟನೆಯವರು ಪತ್ತೆ ಹಚ್ಚಿ ಕೊಟ್ಟು ನೆರವು ನೀಡಿದರು. ಇತ್ತೀಚೆಗೆ ನಾಪತ್ತೆಯಾದಾಗ ಮಣಿಪಾಲ ಎಂಡ್ ಪಾಯಿಂಟ್ನಲ್ಲಿ ಆಕೆಯನ್ನು ಬಜರಂಗದಳದವರು ಪತ್ತೆ ಮಾಡಿದರು ಎಂದು ತಾಯಿ ಸುನೀತಾ ಹೇಳುತ್ತಾರೆ.
ಗೃಹಬಂಧನ-ದೂರು: ಮಣಿಪಾಲದಲ್ಲಿ ಪತ್ತೆಯಾದ ಬಳಿಕ ಮನೆಯಿಂದ ಹೊರ ಹೋಗಲು ಬಿಡಲಿಲ್ಲ. ಹೆತ್ತವರು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಪೊಲೀಸರಿಗೆ, ಮಕ್ಕಳ ಹಕ್ಕು ಕಲ್ಯಾಣ ಸಮಿತಿ ದೂರು ನೀಡಿದಳು. ಆಗ ಆಕೆಗೆ ಚಿಕಿತ್ಸೆ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿ ಸಲಹೆ ಮಾಡಿತ್ತು.
9ನೇ ತರಗತಿವರೆಗೆ ವಿದ್ಯಾಭ್ಯಾಸದಲ್ಲಿ ಶಾಲೆಗೆ ಆಕೆಯೇ ನಂಬರ್ ವನ್. ಬಳಿಕ ಆಕೆ ಕಲಿಕೆಯಲ್ಲಿ ಹಿಂದೆ ಬಿದ್ದಳು. ಆಕೆ ತರಗತಿ ಬಂಕ್ ಮಾಡಿ ಡಿಜೆಗಳಿಗೆ ಹೋಗುತ್ತಿದ್ದಳು ಎಂದು ತಂದೆ ಗುರುರಾಜ್ ಹೇಳುತ್ತಾರೆ. ಆಕೆಗೆ ಗೆಳಯರೂ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮನೆಯಿಂದ ಹಣ ಪಡೆದು ಗೆಳೆಯರ ಬಳಗ ಪ್ರತಿ ನಿತ್ಯ ಪಬ್ಗಳಿಗೆ ಹೋಗುತ್ತಿದ್ದರು. ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಆದರೆ ಉಳಿದವರೂ ಮಕ್ಕಳನ್ನು ಕಳೆದುಕೊಳ್ಳುವ ಮುನ್ನ ಜಾಗೃತರಾಗಲಿ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ವಿನಂತಿಸಿದ್ದಾರೆ ಅವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.