ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಕ್ತಿ ಪ್ರದರ್ಶನವಲ್ಲ, ಆತ್ಮಚಿಂತನೆ

Lingaraj Badiger
Updated On : 4 Feb 2013, 12:55 pm

ಕೆಂಜಾರು ಮೈದಾನ ಬಜಪೆ (ಮಂಗಳೂರು): ಸಾಂಘಿಕ ಸಮ್ಮೇಳನ ಶಕ್ತಿ ಪ್ರದರ್ಶನವಲ್ಲ. ಸ್ವಯಂ ಸೇವಕರ ಆತ್ಮ ಚಿಂತನೆ ಕಾರ್ಯ. ನಾವು ಹಿಂದು, ಇದು ಹಿಂದೂ ರಾಷ್ಟ್ರ ಎಂದು ಧೈರ್ಯದಿಂದ ಹೇಳೋಣ. ಯಾರನ್ನೂ ನಾಶ ಮಾಡದೆ, ವಿರೋಧಿಸದೆ ಕಲ್ಯಾಣ ಬಯಸುವ ದೇಶ ಕಟ್ಟೋಣ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್‌ಜಿ ಭಾಗವತ್ ಹೇಳಿದ್ದಾರೆ.
ಬಜಪೆ ವಿಮಾನ ನಿಲ್ದಾಣ ಬಳಿಯ ಕೆಂಜಾರು ಮೈದಾನದಲ್ಲಿ ಭಾನುವಾರ ನಡೆದ ಲಕ್ಷಕ್ಕೂ ಮಿಕ್ಕಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗಣವೇಷಧಾರಿಗಳ ಸಾಂಘಿಕ ಸಮಾವೇಶದಲ್ಲಿ ಅವರು ಬೌದ್ಧಿಕ ಮಾರ್ಗದರ್ಶನ ನೀಡಿದರು.
ಶಕ್ತಿ ಎದ್ದು ಕಾಣುತ್ತದೆ: ವಿವೇಕಾನಂದರ 150ನೇ ಜನ್ಮದಿನ ಬಹುಳ ಸಪ್ತಮಿಯಂದು ಸಾಂಘಿಕ ಸಮಾವೇಶ ಮಾಡುತ್ತಿದ್ದೇವೆ. ಆದರೆ ಜನರು ಶಕ್ತಿ ಪ್ರದರ್ಶನ ಎಂದು ತಿಳಿದಂತಿದೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸಂಘದ ಪ್ರದರ್ಶನ ಮಂಗಳೂರಲ್ಲಿ ನಡೆಯುತ್ತಿದೆ ಎಂದು ಪ್ರಕಟಿಸಿದ್ದಾರೆ. ಶಕ್ತಿ ಪ್ರದರ್ಶಿಸುವ ಅಗತ್ಯ ನಮಗಿಲ್ಲ. ಶಕ್ತಿ ಇದ್ದರೆ ಅದು ಎದ್ದು ಕಾಣುತ್ತದೆ ಎಂದರು.
ಸಂಘ ಪ್ರೀತಿ ಬಯಸುತ್ತದೆ, ಸೇವೆ ಮಾಡಲು ಇಚ್ಛಿಸುತ್ತದೆ. ಸೇವೆ ಮಾಡುವವರ, ಮಮತೆ ತೋರಿಸುವವರ ಶಕ್ತಿ ಹೆಚ್ಚೇ ಇರುತ್ತದೆ. ಹೀಗಾಗಿ ನಮಗೆ ಶಕ್ತಿ ಪ್ರದರ್ಶನ ಕಾರ್ಯಕ್ರಮದ ಅಗತ್ಯ ಇಲ್ಲ. ಇದು ಸ್ವಯಂ ಸೇವಕರ ಆತ್ಮ ಚಿಂತನೆ ಮಾಡುವ ಕಾರ್ಯಕ್ರಮ. ಪರಿಶುದ್ಧ ಪ್ರೇಮವೇ ನಮ್ಮ ಕಾರ್ಯಕ್ಕೆ ಆಧಾರ. ಶಕ್ತಿ ಜತೆ, ಚಾರಿತ್ರ್ಯ ಇರಬೇಕು ಎಂದರು.
ಶೋಷಣೆಮುಕ್ತ ಸಮರಸ, ಸಮಾನತೆ ಭಾರತ, ವಿವೇಕಾನಂದರ ದೂರದೃಷ್ಟಿಯ ಭಾರತದ ನವೋತ್ಥಾನ ಪಥ ನಾವು ಕಟ್ಟೋಣ. ಮುಂದಿನ 150 ವರ್ಷ ಕಾಲ ಬೇರೆ ದೇವರನ್ನೆಲ್ಲ ಬದಿಗಿಟ್ಟು ಭಾರತಮಾತೆಯನ್ನು ಪೂಜಿಸಿ ಎಂದು ಸ್ವಾಮಿ ವಿವೇಕಾನಂದ ಹೇಳಿದರು. ಅದಕ್ಕಾಗಿ ನಾವು 'ಸದಾ ವತ್ಸಲೇ ಮಾತೃಭೂಮಿ' ಎಂದು ಭಾರತ ಮಾತೆಗೆ ಮೊದಲಿಗೆ ಪೂಜೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ದೊಡ್ಡ ಕಾರ್ಯಕ್ರಮ ಮಾಡಿದ ಜನ ಒಟ್ಟಾಗುತ್ತಾರೆ. ಅದು ತಾತ್ಕಾಲಿಕ. ಇಲ್ಲಿಂದ ಹೋದ ಬಳಿಕ ಸಂಘದ ವಿಚಾರ ಧಾರೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪಸರಿಸಬೇಕು. ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಸಮಾಜ ರಕ್ಷಣೆ ಮಾಡಲು ಕಟಿಬದ್ಧರಾಗೋಣ. ನಾವು ಸಕ್ರಿಯರಾಗಿ ಉಳಿದವರನ್ನು ಈ ಕಾರ್ಯದಲ್ಲಿ ಸಕ್ರಿಯರನ್ನಾಗಿಸೋಣ ೆಂದರು.
ಹೊಟ್ಟೆ ಪಾಡಿನ ಇಂಗ್ಲಿಷ್ ಶಿಕ್ಷಣ ಬಿಟ್ಟು ದರಿದ್ರರ ಬಾಳು ಬೆಳಗಿಸುವ ಸೇವಾ ಮನೋಭಾವದ ಶಿಕ್ಷಣ ನೀಡುತ್ತೇನೆ ಎಂದು ವಿವೇಕಾನಂದರು ಹೇಳಿದ್ದರು. ಪರಾಕ್ರಮ ತೋರಿಸಿದರೆ ಪರಿಸ್ಥಿತಿ ನಮ್ಮೆದುರು ಮಂಡಿಯೂರುತ್ತದೆ ಎಂದರು.  
ಕೀಳರಿಮೆ ಬೇಡ: ಪಾಶ್ಚಾತ್ಯ ದೇಶಗಳು ಭಾರತ ಬಗ್ಗೆ ತಿರಸ್ಕಾರ ಹೊಂದಿದ್ದವು. ಚಿಕಾಗೊದಲ್ಲಿನ ಒಂದು ಭಾಷಣ ವಿಶ್ವದಲ್ಲಿ ಭಾರತೀಯರು ತಲೆ ಎತ್ತುವಂತೆ ಮಾಡಿದೆ. ನಮ್ಮ ಬಗ್ಗೆ ಕೀಳರಿಮೆ ಬೇಡ. ನಾವು ಅಮೃತತ್ವದ ಮಕ್ಕಳು. ಶಾಂತಿ, ಸಂಯಮವನ್ನು ವಿಶ್ವಕ್ಕೆ ಸಾರಿದ ವಿಶ್ವದ ಏಕೈಕ ದೇಶ ಭಾರತ. ನಾವು ನಾಚಿಕೆಪಡುವ ಅಗತ್ಯ ಇಲ್ಲ. ಹಿಂದುಗಳು ಎದ್ದು ನಿಲ್ಲಬೇಕು. ಸ್ವಂತ ಗೌರವದಿಂದ ವ್ಯಕ್ತಿ ತನ್ನನ್ನು ಗೆಲ್ಲಬೇಕು, ದೇಶವನ್ನು ಗೆಲ್ಲಿಸಬೇಕು. ಸ್ವಾರ್ಥ, ಭೇದ, ಹೊಡೆದು ಹಾಕಿ ಪ್ರಾಚೀನ ಹಿಂದೂ ಸಮಾಜ ಒಗ್ಗೂಡಿಸಬೇಕು ಎಂದರು.

ಸ್ವಾಮಿ ವಿವೇಕಾನಂದರ ಕೋತಿ ಅಟ್ಟಿಸಿದ ಕತೆ!
ಸ್ವಾಮಿ ವಿವೇಕಾನಂದರು ಕಾಶಿಯಲ್ಲಿ ಹೋಗುವಾಗ ಒಂದುಕಡೆ ಕೋತಿ ಅಟ್ಟಿಸಿಕೊಂಡು ಬಂದಿತು. ಕೋತಿ ಕಚ್ಚುವ ಭೀತಿಯಲ್ಲಿ ವಿವೇಕಾನಂದರು ಓಡಿದರು, ಬೆನ್ನು ಬಿಡದೆ ಕೋತಿ ಓಡಿಕೊಂಡು ಬಂತು. ವಿವೇಕಾನಂದರು ಬಸವಳಿದರು, ಇನ್ನೇನು ಕೋತಿ ಕಚ್ಚಿಯೇ ಬಿಡುತ್ತದೆ ಎನ್ನುವಾಗ ಎದುರುಗಡೆ ಬರುತ್ತಿದ್ದ ಸಾಧು 'ನಿಲ್ಲು' ಎಂದರು. ವಿವೇಕಾನಂದರು ನಿಂತರು, ಕೋತಿಯೂ ನಿಂತಿತು.ಸಾಧು ತಿರುಗು ಎಂದರು, ವಿವೇಕಾನಂದರು ತಿರುಗಿದರು, ಕೋತಿಯೂ ಹಿಂದೆ ತಿರುಗಿತು. ವಿವೇಕಾನಂದರು ಎರಡು ಹೆಜ್ಜೆ ಮುಂದಿಟ್ಟಾಗ ಕೋತಿ ಹತ್ತು ಹೆಜ್ಜೆ ಹಿಂದೆ ಸರಿದು ಓಟಕ್ಕಿತ್ತಿತು. ಪರಿಸ್ಥಿತಿ ಎದುರಿಸಿ ನಿಂತರೆ ಸಮಸ್ಯೆ ತನ್ನಿಂದ ತಾನಾಗಿಯೊ ಓಡಿ ಹೋಗುತ್ತದೆ ಎಂಬುದನ್ನು ವಿವೇಕಾನಂದರು ಅರಿತರು. ಇದೇ ಪಾಠ ನೋಡಿ ನಾವು ನಿರ್ಭಯರಾಗಿ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಮೋಹನ್‌ಜಿ ಹೇಳಿದರು.
ಮಂಗಳೂರು ವಿಭಾಗ ಸರಕಾರ್ಯವಾಹ ಪಿ.ಎಸ್.ಪ್ರಕಾಶ್ ಸ್ವಾಗತಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಸುರೇಶ್ ಜೋಷಿ, ದಕ್ಷಿಣ ಪ್ರಾಂತ ಸಂಘಚಾಲಕ ಮ.ವೆಂಕಟರಾಮು ಮೈಸೂರು, ಮಂಗಳೂರು ವಿಭಾಗ ಸಂಘಸಂಚಾಲಕ ಡಾ.ವಾಮನ ಶೆಣೈ ಇದ್ದರು. ಮೋಹನ್‌ಜಿ ಭಾಗವತ್ ಭಾಷಣವನ್ನು ಸುಧೀರ್ ಕನ್ನಡಕ್ಕೆ ಭಾಷಾಂತರಿಸಿದರು. ವೇದಿಕೆಯಲ್ಲಿ ಸಂಘ ಪ್ರಮುಖರಾದ ಕೃ. ಸೂರ್ಯನಾರಾಯಣ ರಾವ್, ಮೈ.ಚ.ಜಯದೇವ, ನ.ಕೃಷ್ಣಪ್ಪ, ಕೆ.ಸಿ.ಕಣ್ಣನ್, ಅಜಿತ್ ಮಹಾಪಾತ್ರ. ಮಂಗೇಶ್ ಭೇಂಡೆ, ರಾಮಕೃಷ್ಣ ರಾವ್, ಸುಧೀರ್ ಗಾಡ್ಗೀಳ್, ವಿ.ನಾಗರಾಜ್. ಧಾಮ ರವೀಂದ್ರ, ಡಾ.ಕಲ್ಲಡ್ಕ ಪ್ರಭಾಕ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸು.ರಾಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement