ಶಕ್ತಿ ಪ್ರದರ್ಶನವಲ್ಲ, ಸ್ವಯಂಸೇವಕರ ಆತ್ಮಚಿಂತನೆ ಕಾರ್ಯ
ಕೆಂಜಾರು ಮೈದಾನ ಬಜಪೆ (ಮಂಗಳೂರು): ಸಾಂಘಿಕ ಸಮ್ಮೇಳನ ಶಕ್ತಿ ಪ್ರದರ್ಶನವಲ್ಲ. ಸ್ವಯಂ ಸೇವಕರ ಆತ್ಮ ಚಿಂತನೆ ಕಾರ್ಯ. ನಾವು ಹಿಂದು, ಇದು ಹಿಂದೂ ರಾಷ್ಟ್ರ ಎಂದು ಧೈರ್ಯದಿಂದ ಹೇಳೋಣ. ಯಾರನ್ನೂ ನಾಶ ಮಾಡದೆ, ವಿರೋಧಿಸದೆ ಕಲ್ಯಾಣ ಬಯಸುವ ದೇಶ ಕಟ್ಟೋಣ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್‌ಜಿ ಭಾಗವತ್ ಹೇಳಿದ್ದಾರೆ.
ಬಜಪೆ ವಿಮಾನ ನಿಲ್ದಾಣ ಬಳಿಯ ಕೆಂಜಾರು ಮೈದಾನದಲ್ಲಿ ಭಾನುವಾರ ನಡೆದ ಲಕ್ಷಕ್ಕೂ ಮಿಕ್ಕಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗಣವೇಷಧಾರಿಗಳ ಸಾಂಘಿಕ್ ಸಮಾವೇಶದಲ್ಲಿ ಅವರು ಬೌದ್ಧಿಕ ಮಾರ್ಗದರ್ಶನ ನೀಡಿದರು.
ವಿವೇಕಾನಂದರ 150ನೇ ಜನ್ಮದಿನ ಬಹುಳ ಸಪ್ತಮಿಯಂದು ಸಾಂಘಿಕ್ ಸಮಾವೇಶ ಮಾಡುತ್ತಿದ್ದೇವೆ. ಆದರೆ ಜನರು ಶಕ್ತಿ ಪ್ರದರ್ಶನ ಎಂದು ತಿಳಿದಂತಿದೆ.
ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸಂಘದ ಪ್ರದರ್ಶನ ಮಂಗಳೂರಲ್ಲಿ ನಡೆಯುತ್ತಿದೆ ಎಂದು ಪ್ರಕಟಿಸಿದ್ದಾರೆ. ಶಕ್ತಿ ಪ್ರದರ್ಶಿಸುವ ಅಗತ್ಯ ನಮಗಿಲ್ಲ. ಶಕ್ತಿ ಇದ್ದರೆ ಅದು ಎದ್ದು ಕಾಣುತ್ತದೆ. ಸಂಘ ಪ್ರೀತಿ ಬಯಸುತ್ತದೆ, ಸೇವೆ ಮಾಡಲು ಇಚ್ಛಿಸುತ್ತದೆ. ಸೇವೆ ಮಾಡುವವರ, ಮಮತೆ ತೋರಿಸುವವರ ಶಕ್ತಿ ಹೆಚ್ಚೇ ಇರುತ್ತದೆ. ಹೀಗಾಗಿ ನಮಗೆ ಶಕ್ತಿ ಪ್ರದರ್ಶನ ಕಾರ್ಯಕ್ರಮದ ಅಗತ್ಯ ಇಲ್ಲ. ದೊಡ್ಡ ಕಾರ್ಯಕ್ರಮ ಮಾಡಿದ ಜನ ಒಟ್ಟಾಗುತ್ತಾರೆ. ಅದು ತಾತ್ಕಾಲಿಕ. ಇಲ್ಲಿಂದ ಹೋದ ಬಳಿಕ ಸಂಘದ ವಿಚಾರ ಧಾರೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪಸರಿಸಬೇಕು ಎಂದರು.
ಲಕ್ಷ ಗಣವೇಷಧಾರಿಗಳು
ಸಾಂಘಿಕ್ ಸಮಾವೇಶದಲ್ಲಿ ಬೈಂದೂರಿನಿಂದ ಕುಶಾಲನಗರವರೆಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ 1152 ಗ್ರಾಮಗಳ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಹೊಸ ಇತಿಹಾಸ ದಾಖಲಿಸಿದರು. ಮಾಜಿ ಸಿಎಂ ಸದಾನಂದಗೌಡ, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಸಚಿವ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಶಾಸಕ ಕೃಷ್ಣ ಪಾಲೇಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ, ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಗೋವಾ ಸ್ಪೀಕರ್ ರಾಜೇಂದ್ರ ಅರಳೀಕರ್ ಕೂಡ ಸಮಾವೇಶಕ್ಕೆ ಆಗಮಿಸಿದ್ದು ಗಮನಾರ್ಹವಾಗಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.