ಕಾರು ಗುದ್ದಿ ಚಿನ್ನ ದರೋಡೆ: ಚಾಲಕನೇ ಸೂತ್ರಧಾರ
ಸುಳ್ಯ: ವಾರದ ಹಿಂದೆ ಕಲ್ಲುಗುಂಡಿ ಬಳಿಯ ಕಡಪಾಲದಲ್ಲಿ ಕಾರಿಗೆ ಕಾರು ತಾಗಿಸಿ ಚಿನ್ನ ದರೋಡೆ ನಡೆಸಿದ ಆರೋಪಿಗಳನ್ನು ಒಂದು ವಾರದೊಳಗೆ ಪತ್ತೆ ಹಚ್ಚುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ದರೋಡೆಗೊಳಗಾದ ಕುಟುಂಬವನ್ನು ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದ ಕಾರಿನ ಚಾಲಕನೇ ಪ್ರಕರಣದ ಸೂತ್ರಧಾರನೆಂಬ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಸೋಮವಾರಪೇಟೆ ತಾಲೂಕಿನ ಹೊಸೂರು- ಮದ್ಗಾಪುರ ನಿವಾಸಿ ನಾಗರಾಜ್ ಎಂಬವರು ತನ್ನ ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಜ. 28ರಂದು ಸೋಮವಾರಪೇಟೆಯ ಮನೆಗೆ ಬಂದು ಮರುದಿನ ಧರ್ಮಸ್ಥಳಕ್ಕೆ ಹೋಗಿ- ರಾತ್ರಿ ತಂಗಿ ಅಲ್ಲಿಂದ ಜ. 27ರಂದು ಬೆಳಗ್ಗೆ ಹೊರಟು ಸುಬ್ರಹ್ಮಣ್ಯಕ್ಕೆ ಬಂದು ಸಂಜೆ ಅಲ್ಲಿಂದ ಸುಳ್ಯ ಮಾರ್ಗವಾಗಿ ಸೋಮವಾರಪೇಟೆಗೆ ಹೊರಟಿದ್ದರು. ಹೋಗುವ ದಾರಿಯಲ್ಲಿ ಕಡಪಾಲ ಎಂಬಲ್ಲಿ ತಮ್ಮ ಕಾರಿಗೆ ಕಾರು ತಾಗಿಸಿ ಚಿನ್ನ ದರೋಡೆ ನಡೆಸಿದರೆಂದು ನಾಗರಾಜ್ ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ತನಿಖೆ ಆರಂಭಿಸಿದ ಸುಳ್ಯ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಗೊಳಗಾದ ಕುಟುಂಬವನ್ನು ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ದ ಕಾರಿನ ಚಾಲಕನೇ ಪ್ರಕರಣದ ಸೂತ್ರಧಾರನಾಗಿದ್ದ. ಬೆಂಗಳೂರಿಗರಾದ ಚಂದ್ರಶೇಖರ, ಶ್ರೀನಿವಾಸ ಮತ್ತು ಮಂಜುನಾಥ ದರೋಡೆ ಕೃತ್ಯ ನಡೆಸಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಸೋಮವಾರ ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.
ನಾಪತ್ತೆಯಾಗಿದ್ದ ಯುವತಿ ಪತಿಯೊಂದಿಗೆ ಪತ್ತೆ
ಪುತ್ತೂರು: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಜನತಾ ಕಾಲೋನಿಯಿಂದ 10 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆದಿವಾಸಿ ಕೊರಗ ಜನಾಂಗದ ಯುವತಿಯೊಬ್ಬರು ಸೋಮವಾರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಂಬಿಬಾಣೆ ಎಂಬಲ್ಲಿ ಪತ್ತೆಯಾಗಿದ್ದಾರೆ. ಕೆಯ್ಯೂರು ಗ್ರಾಮದ ಮಾಡಾವು ಜನತಾ ಕಾಲೋನಿಯ ಚನಿಯ ಕೊರಗ ಮತ್ತು ಅಂಗಾರೆ ದಂಪತಿ ಪುತ್ರಿ ಸೀತು ಯಾನೆ ಸೀತಾ ಎಂಬವರು ಕಳೆದ ಮಾ.11ರಿಂದ ನಾಪತ್ತೆಯಾಗಿದ್ದರು. ಈ ಕುರಿತು ಆಕೆಯ ತಾಯಿ ಅಂಗಾರೆ ಅವರು ಸಂಪ್ಯ ಪೊಲೀಸರಿಗೆ ಮಾ.13ರಂದು ದೂರು ನೀಡಿದ್ದರು. ಸೀತು ಅವರು ತನ್ನದೇ ಸಮುದಾಯಕ್ಕೆ ಸೇರಿದ ಸವಣೂರು ಕಡೆಯ ವಿಜಯ ಎಂಬವರೊಂದಿಗೆ ನಾಪತ್ತೆಯಾಗಿದ್ದರು ಎಂಬ ಮಾಹಿತಿ ಆ ವೇಳೆ ಇತ್ತು. ಆದರೆ ನಾಪತ್ತೆಯಾದ ಜೋಡಿಯ ಪತ್ತೆಯಾಗಿರಲಿಲ್ಲ. ಸಂಪ್ಯ ಠಾಣೆ ಎಎಸ್‌ಐ ಚೆಲುವಯ್ಯ ಮತ್ತು ಸಿಬ್ಬಂದಿ ಸೋಮವಾರ ಸೀತು ಮತ್ತು ವಿಜಯ ಅವರನ್ನು ಕೊಡುಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಂಬಿಬಾಣೆ ಎಂಬಲ್ಲಿ ಪತ್ತೆ ಹಚ್ಚಿ ಹೆತ್ತವರ ಸಮ್ಮುಖದಲ್ಲಿ ಅವರ ಹೇಳಿಕೆ ದಾಖಲಿಸಿಕೊಂಡು ಬಳಿಕ ಆಕೆಯನ್ನು ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ನಾಪತ್ತೆಯಾಗಿದ್ದ ಸೀತು ಮತ್ತು ವಿಜಯ ಸೋಮವಾರಪೇಟೆಯ ಕಂಬಿಬಾಣೆ ಎಂಬಲ್ಲಿಗೆ ತೆರಳಿ ಅಲ್ಲಿನ ಭೂಮಾಲಿಕರೊಬ್ಬರ ಮನೆಯಲ್ಲಿ ಕೂಲಿಯಾಳುಗಳಾಗಿ ದುಡಿಯುತ್ತಿದ್ದು, ಇದೀಗ ಸೀತು 11 ತಿಂಗಳ ಬಾಣಂತಿಯಾಗಿರುವುದಾಗಿ ತಿಳಿದು ಬಂದಿದೆ.
ವಾಹನಗಳಿಗೆ
ವಿಟ್ಲ: ಸರಕು ಸಾಗಾಟದ ಲಾರಿಯೊಂದು ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಹಾರಾಷ್ಟ್ರ ರಿಜಿಸ್ಟ್ರೇಶನ್ ಹೊಂದಿರುವ ಲಾರಿ, ಕಲ್ಲಡ್ಕ ರಸ್ತೆಯಾಗಿ ವಿಟ್ಲ ಕಡೆ ಅತಿ ವೇಗದಿಂದ ಬಂದು ವಿಟ್ಲದಿಂದ ಮಂಗಳೂರು ಕಡೆ ಆರ್‌ಎಸ್‌ಎಸ್ ಸಾಂಘಿಕ್‌ಗೆ ತೆರಳುತ್ತಿದ್ದ ಸ್ವಯಂ ಸೇವಕರಿದ್ದ ಬಸ್ಸಿಗೆ ಕೆಲಿಂಜದಲ್ಲಿ ಡಿಕ್ಕಿ ಹೊಡೆಯಿತು. ಬಳಿಕ ಮಂಗಿಲಪದವಿನಲ್ಲಿ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮಂಗಿಲಪದವಿನಲ್ಲಿದ್ದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಪೊಲೀಸರು ನಾಲ್ಕು ಮಾರ್ಗ ಜಕ್ಷಂನ್ ತಲುಪುವ ಸಮಯಕ್ಕೆ ಲಾರಿ ಪರಾರಿಯಾಗಿತ್ತು. ಸ್ವಯಂ ಸೇವಕರಿದ್ದ ಬಸ್ಸು ವಿಟ್ಲದವರೆಗೆ ಬಂದರೂ ಲಾರಿ ಪತ್ತೆಯಾಗಿಲ್ಲ. ಬಸ್ಸಿಗೆ ಸ್ವಲ್ಪ ಜಖಂ ಆಗಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಬೈಕ್ ಸವಾರನೂ ಅಪಾಯದಿಂದ ಪಾರಾದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.