ಪಡಿತರಚೀಟಿ ಶೀಘ್ರ ವಿತರಣೆಗೆ ಪುತ್ತೂರು ತಾ.ಪಂ. ಪ್ರಭಾರ ಇಒ ಸೂಚನೆ
ಪುತ್ತೂರು: ಪಡಿತರ ಚೀಟಿ ವಿತರಣೆ ಸೇರಿದಂತೆ ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಮಂಗಳವಾರ ನಡೆದ ಪುತ್ತೂರು ತಾಲೂಕು ಕೆಡಿಪಿ ಸಭೆಯಲ್ಲಿ ಬಾರಿ ಚರ್ಚೆ ನಡೆಯಿತು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಾಬು ಕೆ. ಮಾದೋಡಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಡಿತರ ಚೀಟಿ ವಿಷಯದ ಕುರಿತು ದೀರ್ಘ ಚರ್ಚೆ ನಡೆಯಿತು.
1800 ಗುರಿ: ಆಹಾರ ಇಲಾಖೆಯ ಅಧಿಕಾರಿ ಮೋನಪ್ಪ, ಇಲಾಖೆಯ ಕುರಿತು ಮಾಹಿತಿ ನೀಡುತ್ತಾ ಸುಮಾರು 1800 ಪಡಿತರ ಚೀಟಿ ನೀಡುವ ಗುರಿ ಹೊಂದಲಾಗಿದ್ದು, ಈ ಪೈಕಿ 200 ಪಡಿತರ ಚೀಟಿಯನ್ನು ಬಿಪಿಎಲ್‌ನಿಂದ ಅಂತ್ಯೋದಯ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ವಿತರಣೆ ಸ್ಥಗಿತ: ಪಡಿತರ ಚೀಟಿ ವಿತರಣೆಗೆ ಸಮರ್ಪಕ ಸೌಕರ್ಯ ದೊರೆತಿಲ್ಲ ಎಂಬ ವಿಚಾರವನ್ನು ಅವರು ಸಭೆಯಲ್ಲಿ ತಿಳಿಸಿದ ಅವರು ಕೋಡಿಂಬಾಡಿ, ಕೊಂಬಾರು, ಉಪ್ಪಿನಂಗಡಿ, ಬಡಗನ್ನೂರು, ಪಾಣಾಜೆ, ನೆಟ್ಟಣಿಗೆ ಮುಡ್ನೂರು ಮೊದಲಾದ ಕಡೆಗಳಲ್ಲಿ ಸರಿಯಾದ ಸೌಕರ್ಯವಿಲ್ಲದೆ ಪಡಿತರಚೀಟಿ ಹಂಚಿಕೆ ಅರ್ಧದಲ್ಲೇ ಸ್ಥಗಿತಗೊಂಡಿದೆ ಎಂದರು.
ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶೇಷಶಯನ ಕಾರಿಂಜ, ಜನರಿಗೆ ಅನುಕೂಲವಾಗುವಂತೆ ಆದಷ್ಟು ಶೀಘ್ರವಾಗಿ ಪಡಿತರ ಚೀಟಿ ವಿತರಿಸಲು ಕ್ರಮಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದರು.
12ರಿಂದ ಗುಳಿಗೆ ವಿತರಣೆ: ತಾಲೂಕು ಆರೋಗ್ಯಾಧಿಕಾರಿ ಬದ್ರುದ್ದೀನ್, 12ರಿಂದ 14ರ ತನಕ ಪೈಲೇರಿಯಾ ರೋಗದ ಬಗ್ಗೆ ಮನೆಮನೆಗಳಿಗೆ ತೆರಳಿ ಮಾಹಿತಿ ಮತ್ತು ಗುಳಿಗೆ ವಿತರಿಸುವ ಕಾರ್ಯಕ್ರಮ ಹಾಗೂ 24 ರಂದು ಪಲ್ಸ್ ಪೋಲಿಯೊ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿದ್ಯುತ್ ನಿಲುಗಡೆ ಸಮಸ್ಯೆ: ಅನಿಯಮಿತ ವಿದ್ಯುತ್ ನಿಲುಗಡೆ ವಿಚಾರ ಪ್ರಸ್ತಾಪವಾದಾಗ, ಈ ಬಗ್ಗೆ ಮಾಹಿತಿ ನೀಡಿದ ಮೆಸ್ಕಾಂ ವಲಯ ಅಧಿಕಾರಿ ರೋಹಿತ್ ರಾಯಚೂರು ವಿದ್ಯುತ್ ಘಟಕದಲ್ಲಿ ಸಮಸ್ಯೆ ಬಂದ ಕಾರಣ ಕಳೆದ ತಿಂಗಳಿನಿಂದ ಲೋಡ್ ಶೆಡ್ಡಿಂಗ್‌ನಲ್ಲಿ ಏರುಪೇರಾಗುತ್ತದೆ. ಅಷ್ಟೇ ಅಲ್ಲದೇ ಸರ್ಕಾರ ವಿದ್ಯುತ್ ಪೂರೈಕೆ ಬಗ್ಗೆ ನಿಗದಿತ ಸಮಯದ ನಿರ್ದೇಶನ ಕೂಡಾ ಕೊಟ್ಟಿಲ್ಲ. ಇದರಿಂದಾಗಿ ಎಷ್ಟು ಗಂಟೆ ವಿದ್ಯುತ್ ಕಡಿತ ಮಾಡಬಹುದೆಂಬುದರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಬಸ್ ಸೌಕರ್ಯ ಕೊರತೆ: ದರ್ಬೆ-ಕಾಣಿಯೂರು ಸುಬ್ರಹ್ಮಣ್ಯ ಕಡೆಗೆ ರಾತ್ರಿ 8.30ರ ನಂತರ ಪುತ್ತೂರಿನಿಂದ ಬಸ್ ವ್ಯವಸ್ಥೆಯಿಲ್ಲ. ಇದರಿಂದಾಗಿ ಜನತೆಗೆ ಸಮಸ್ಯೆಯಾಗುತ್ತಿದೆ ಎಂದ ಉಪಾಧ್ಯಕ್ಷ ಬಾಬು ಮಾದೋಡಿ, ಅಧಿಕಾರಿಗಳು ಸಮಯದ ಬದಲಾವಣೆ ಮಾಡಿ ಕೊಡಬೇಕೆಂದು ಸೂಚಿಸಿದರು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ದಯಾನಂದ ಆಲಡ್ಕ, ತಾಲೂಕು ಪಮಚಾಯಿತಿ ಲೆಕ್ಕಾಧಿಕಾರಿ ನಾಗರಾಜ್ ಮತ್ತಿತರರು ಹಾಜರಿದ್ದರು.