ಮಕ್ಕಳ ಪೌಷ್ಟಿಕತೆಗೆ ಕೇಂದ್ರ
ಮಂಗಳೂರು: ಪ್ರಸ್ತುತ ಎಲ್ಲೆಡೆ ಅಪೌಷ್ಟಿಕ ಮಕ್ಕಳದ್ದೇ ಸುದ್ದಿ, ಜಿಲ್ಲಾವಾರು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರ್ಕಾರ, ಕೇಂದ್ರ ಅನುದಾನದಡಿ ಪ್ರತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 'ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ'(ಆರ್ಎಪಿಸಿ)ತೆರೆಯಲು ತೀರ್ಮಾನಿಸಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ಅತ್ಯಾಧುನಿಕ ವಿಭಾಗದಲ್ಲಿ 10 ಹಾಸಿಗೆಗಳ ಕೇಂದ್ರವನ್ನು ತೆರೆಯಲಾಗಿದ್ದು, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಇದು ವರದಾನ.
ರಾಯಚೂರು, ಗುಲ್ಬರ್ಗ, ಬಿಜಾಪುರಗಳಲ್ಲಿ ಕಳೆದ ವರ್ಷವೇ ಆರ್ಎಪಿಸಿ ಕೇಂದ್ರ ಪ್ರಾರಂಭವಾಗಿದ್ದು, ದಾವಣಗೆರೆ ಮತ್ತು ಮಂಗಳೂರಿನಲ್ಲಿ ಈಗಷ್ಟೆ ಶುರುವಾಗಿದೆ. 1ರಿಂದ 5 ವರ್ಷದವರೆಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಇಲ್ಲಿ ದಾಖಲಿಸಿ ಪೌಷ್ಟಿಕತೆಯತ್ತ ಕೊಂಡೊಯ್ಯುವುದೇ ಈ ಕೇಂದ್ರದ ಉದ್ದೇಶ. ಕೇಂದ್ರಕ್ಕೆ ದಾಖಲಾದ ಮಕ್ಕಳು 15 ದಿನದಲ್ಲಿ ಪೌಷ್ಟಿಕತೆಯಿಂದ ಹೊರಬರಬೇಕು. ಅದಕ್ಕೆ ಬೇಕಾದ ಆಹಾರವನ್ನು ನೀಡಿ, ಅವರನ್ನು ಪೋಷಿಸುವುದು ಕೇಂದ್ರದ ಜವಾಬ್ದಾರಿ. ಕೇವಲ 10 ಹಾಸಿಗೆ ಕೇಂದ್ರ ಇದಾಗಿರುವದರಿಂದ ಸರದಿಯಲ್ಲಿ ಮಕ್ಕಳನ್ನು, ತಾಯಿಯನ್ನು ಇಲ್ಲಿ ಸೇರ್ಪಡೆಗೊಳಿಸಲಾಗುತ್ತದೆ.
ಅಪೌಷ್ಟಿಕ ಮಕ್ಕಳಿಗೆ ಮಾತ್ರ: ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಾದೇಶಿಕ ಮಕ್ಕಳ ಆಧುನಿಕ ನಿಗಾ ಘಟಕದ 2ನೇ ಮಹಡಿಯಲ್ಲಿ ಆರ್ಎಪಿಸಿ ಕೇಂದ್ರ ತೆರೆಯಲಾಗಿದೆ. 10 ಹಾಸಿಗೆಯ ಈ ಕೇಂದ್ರದಲ್ಲಿ ದಾಖಲಾಗುವ ಅಪೌಷ್ಟಿಕ ಮಗುವಿನ ಜತೆ ತಾಯಿಗೂ ಮೂರು ಹೊತ್ತು ಊಟ, ಆರೈಕೆ ಪಾಠ ಹೇಳಿಕೊಡಲಾಗುತ್ತದೆ.
ಉಪ್ಪು ಇಲ್ಲದೆ ಹಾಲಿನ ಜತೆ ಬೆಲ್ಲವನ್ನು ಸೇರಿಸಿ ತಯಾರಿಸಿದ ಚರುಮುರಿಯನ್ನು ಮಗುವಿಗೆ ಪೌಷ್ಟಿಕ ಆಹಾರವಾಗಿ ನೀಡಲಾಗುತ್ತದೆ. ಅಲ್ಲದೆ ಸ್ಥಳೀಯ ಬೇಕರಿ ಖಾದ್ಯಗಳನ್ನೂ ಕೊಡುತ್ತಾರೆ. ಆಸ್ಪತ್ರೆಯಿಂದ ನಿರ್ಗಮಿಸುವಾಗ ಪೌಷ್ಟಿಕ ಆಹಾರ, ಔಷಧ, 3 ತಿಂಗಳಿಗೊಮ್ಮೆ ಮಗುವಿನ ದೇಹತೂಕ ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸುತ್ತಾರೆ.
ಜಿಲ್ಲೆಯಲ್ಲಿ 843 ಅಪೌಷ್ಟಿಕ ಮಕ್ಕಳು: ಜಿಲ್ಲೆಯಲ್ಲಿ ಒಟ್ಟು 843 ಮಂದಿ(ಶೇ.30) ಅಪೌಷ್ಟಿಕ ಮಕ್ಕಳಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ, ಅಂಗನವಾಡಿಗೆ ಬರುತ್ತಿರುವವರಲ್ಲಿ 712 ಮಕ್ಕಳು ಹಾಗೂ ಅಂಗನವಾಡಿಯಿಂದ ಹೊರಗಿರುವವರಲ್ಲಿ 131 ಮಕ್ಕಳಲ್ಲಿ ಅಪೌಷ್ಟಿಕತೆ ಕಂಡುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಗುವಿನ ರಟ್ಟೆಯ ಸುತ್ತಳತೆ 15.50 ಸೆಂಟಿ ಮೀಟರ್ಗಿಂತ ಜಾಸ್ತಿ ಇದ್ದರೆ ಪೌಷ್ಟಿಕಯುಕ್ತ ಮಗು ಎಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳ 13.50 ಸೆಂಟಿ ಮೀಟರ್ ಕಂಡುಬಂದಿತ್ತು. ಅಂಥ ಮಕ್ಕಳನ್ನು ಪೌಷ್ಟಿಕರನ್ನಾಗಿ ಮಾಡಲು ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಈ ಕೇಂದ್ರದಲ್ಲಿ ಇಬ್ಬರು ವೈದ್ಯರು, 4 ಮಂದಿ ದಾದಿಯರು, ಅಡುಗೆಯವರು ಇರುತ್ತಾರೆ. ಮಕ್ಕಳಿಗೆ ಸ್ನಾನದ ಕೋಣೆ, ಆಟದ ಪರಿಕರಗಳೂ ಇಲ್ಲಿವೆ.
- ಆತ್ಮಭೂಷಣ್