ಎಂಡೋ ಪೀಡಿತರಿಗೆ ಕೇರಳಕ್ಕಿಂತ ಉತ್ತಮ ಪ್ಯಾಕೇಜ್: ಲಿಂಬಾವಳಿ
ವಿಧಾನಸಭೆ: ರಾಜ್ಯದಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಕೇರಳ ಮಾದರಿಗಿಂತ ಉತ್ತಮ ಪ್ಯಾಕೇಜ್ ನೀಡಲಾಗುವುದು ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಅಲ್ಲದೆ, ಎಂಡೋಸಲ್ಫಾನ್‌ನಿಂದ ಆಗುವ ಅಪಾಯಗಳ ಬಗ್ಗೆ ವೈಜ್ಞಾನಿಕ ರೀತಿಯ ಸಮೀಕ್ಷೆ ನಡೆಸಲಾಗುತ್ತಿದ್ದು, ಸಮೀಕ್ಷೆ ಮುಗಿದ ಕೂಡಲೇ ಎಂಡೋ ನಿಷೇಧ ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಮಗ್ರ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಸದಸ್ಯ ಎಲ್.ಎ. ರವಿಸುಬ್ರಮಣ್ಯ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಎಂಡೋಸಲ್ಫಾನ್ ಪೀಡಿತರಿಗೆ ವಿಶೇಷ ಪ್ಯಾಕೇಜ್ ನೀಡುವ ವಿಚಾರ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಆರೋಗ್ಯ ಇಲಾಖೆ ನೀಡುವ ವರದಿ ಆಧರಿಸಿ ಅವರು ಪ್ಯಾಕೇಜ್ ಸಿದ್ಧಪಡಿಸುತ್ತಾರೆ. ಈ ಪ್ಯಾಕೇಜ್ ಕೇರಳ ರಾಜ್ಯ ನೀಡಿರುವ ಪ್ಯಾಕೇಜ್‌ಗಿಂತಲೂ ಉತ್ತಮವಾಗಿರುತ್ತದೆ ಎಂದು ಅವರು ಭರವಸೆ ನೀಡಿದರು.
ಇನ್ನಷ್ಟು ಡೇ ಕೇರ್ ಸೆಂಟರ್ ಸ್ಥಾಪನೆ: ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ರಾಜ್ಯದ ದಕ್ಷಿಣ ಕನ್ನಡದಲ್ಲಿ 1907, ಉಡುಪಿಯಲ್ಲಿ 1703 ಹಾಗೂ ಉತ್ತರ ಕನ್ನಡದಲ್ಲಿ 383 ಎಂಡೋಸಲ್ಫಾನ್ ಪೀಡಿತರು ಕಂಡುಬಂದಿದ್ದಾರೆ. ಇವರ ಚಿಕಿತ್ಸೆಗಾಗಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಹಾಗೂ ಸರ್ಕಾರದ ಒಡಂಬಡಿಕೆಯೊಂದಿಗೆ ಕೊಕ್ಕಡ ಮತ್ತು ಆಲಂಕಾರು ಗ್ರಾಮಗಳಲ್ಲಿ ಎರಡು ಡೆ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗಿದ್ದು, ಇನ್ನೊಂದು ಡೇ ಕೇರ್ ಸೆಂಟರ್ ಆರಂಭಿಸಲು ತೀರ್ಮಾನಿಸಲಾಗಿದೆ. ಜತೆಗೆ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಪೀಡಿತರ ಸಮೀಕ್ಷಾ ವರದಿ ಆಧರಿಸಿ ಆ ಭಾಗದಲ್ಲಿ ಡೇ ಕೇರ್ ಸೆಂಟರ್‌ಗಳನ್ನು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಲಿಂಬಾವಳಿ ತಿಳಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕ ರವಿಸುಬ್ರಮಣ್ಯ, ಎಂಡೋ ಪೀಡಿತರಿಗೆ ನೆರವಾಗಲು ಸರ್ಕಾರ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿದೆ. ಶೀಘ್ರವೇ ಪ್ಯಾಕೇಜ್ ಘೋಷಿಸಿ ಅವರ ಜೀವನೋಪಾಯಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ಜತೆಗೆ ಎಂಡೋಸಲ್ಫಾನ್ ನಿಷೇಧ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಮುಂದೆ ಮತ್ತೆ ಅರ್ಜಿ ಸಲ್ಲಿಸಬೇಕಾಗಿದೆ ಎಂದು ಹೇಳಿದರು. ಭಟ್ಕಳ ಶಾಸಕ ಜೆ.ಡಿ. ನಾಯಕ್ ಕೂಡ ಇದಕ್ಕೆ ದನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಲಿಂಬಾವಳಿ, ಎಂಡೋಸಲ್ಫಾನ್ ಸಿಂಪಡಣೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಡೆಸುವ ಸಂಶೋಧನೆಯಲ್ಲಿ ಸಿಗುವ ವರದಿಯಲ್ಲಿ ಸ್ಪಷ್ಟತೆ ಇರುವುದರಿಂದ ಎಂಡೋಸಲ್ಫಾನ್ ಬಳಕೆ ನಿಷೇಧಿಸಲು ಅಧಿಕೃತ ದಾಖಲೆಗಳು ಸಿಕ್ಕಂತಾಗುತ್ತದೆ. ಈ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಒದಗಿಸಿ ಎಂಡೋ ನಿಷೇಧ ಮುಂದುವರಿಸುವಂತೆ ಕೋರಲಾಗುತ್ತದೆ ಎಂದರು.
ಮದುವೆಯಾಗಿ ಹೊರಹೋದವರ ಪರಿಗಣನೆ: ಮಧ್ಯೆ ಪ್ರವೇಶಿಸಿದ ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್ ಅವರು, ಎಂಡೋ ಪೀಡಿತರ ಸಮೀಕ್ಷೆ ನಡೆಸುವ ಮತ್ತು ಪ್ಯಾಕೇಜ್ ನಿಗದಿಪಡಿಸುವ ಸಂದರ್ಭದಲ್ಲಿ ಎಂಡೋಪೀಡಿತ ಪ್ರದೇಶಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ, ಆ ಪ್ರದೇಶದಿಂದ ಬೇರೆ ಕಡೆ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳು ಮತ್ತು ಅವರಿಗೆ ಹುಟ್ಟಿದ ಮಕ್ಕಳಲ್ಲಿ ಸಮಸ್ಯೆ ಉಂಟಾಗಿದೆ. ಈ ವಿಚಾರವನ್ನೂ ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಲಿಂಬಾವಳಿ, ಪ್ರಸ್ತುತ ನಡೆಸುತ್ತಿರುವ ಸಮೀಕ್ಷೆಯಲ್ಲಿ ಈ ಅಂಶವನ್ನೂ ಪರಿಗಣಿಸಲಾಗಿದೆ ಎಂದು ಹೇಳಿದರು.