ಪಾನಮತ್ತ ಬೈಕ್ ಸವಾರನನ್ನು ರಕ್ಷಿಸಿದ ಉದ್ಯಮಿಗಳು
ಉಪ್ಪಿನಂಗಡಿ: ವಿದ್ಯಾವಂತ ಯುವಕ ದೇಹದ ನಿಯಂತ್ರಣ ಕಳೆದುಕೊಳ್ಳುವಷ್ಟು ಮದ್ಯಪಾನ ಮಾಡಿ ಬೈಕ್ ಚಲಾಯಿಸಲು ಮುಂದಾದಾಗ, ಉದ್ಯಮಿಗಳಿಬ್ಬರು ಆತನನ್ನು ತಡೆಗಟ್ಟಿ ಸಂಭವನೀಯ ಅಪಾಯವನ್ನು ತಪ್ಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಸುಮಾರು ಇಪ್ಪತ್ತೈದರ ಬೈಕ್ ಸವಾರ ಉಪ್ಪಿನಂಗಡಿಯಲ್ಲಿ ಹೆದ್ದಾರಿ ಬದಿ ನೆಲಕ್ಕುರುಳಿದ. ಉದ್ಯಮಿ ಯು. ರಾಮ ಮತ್ತು ಕವಿರಾಜ ಗುಂಡ್ಯ ವಿಚಾರಿಸಿದಾಗ ತಾನು ಶಿಶಿಲ ಕೊಕ್ಕಡಕ್ಕೆ ಹೋಗಬೇಕಾಗಿದೆ ಎಂದ. ಆತ ಬೈಕ್ ಚಲಾಯಿಸುವ ಸ್ಥಿತಿಯಲ್ಲಿ ಇಲ್ಲದಿರುವುದನ್ನು ಕಂಡ ಅವರಿಬ್ಬರೂ ಆತನ ಬೈಕಿನ ಚಕ್ರದ ಗಾಳಿ ತೆಗೆದು ಬೈಕ್ನ್ಲ್ಲಿ ಸಂಚರಿಸದಂತೆ ನೋಡಿದರು. ಆತನ ಮೊಬೈಲ್ನಲ್ಲಿ ಆತನ ತಂದೆಯ ನಂಬ್ರವನ್ನು ಪತ್ತೆ ಹಚ್ಚಿ ಮಗನ ದುಸ್ಥಿತಿಯನ್ನು ವಿವರಿಸಿದರು. ಜೀಪಿನೊಂದಿಗೆ ಬಂದ ತಂದೆ ಮಗನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದರು.