ಲಾರಿಯಿಂದ ಬಿದ್ದಾತಗೆ ಯುವಕರಿಂದ ಉಪಚಾರ
ಸುಳ್ಯ: ಹುಬ್ಬಳ್ಳಿಯಿಂದ ಕೇರಳಕ್ಕೆ ಈರುಳ್ಳಿ ಸಾಗಿಸುತ್ತಿದ್ದ ಲಾರಿಯಿಂದ ಕ್ಲೀನರ್ ಕೇರಳದಲ್ಲಿ ಬಿದ್ದು ಕಾಲು ಜಖಂಗೊಂಡು ಅಲೆದಾಡಿ ಸುಳ್ಯ ಸೇರಿರುವ ಘಟನೆ ಸಂಭವಿಸಿದೆ. 6 ದಿನದ ಹಿಂದೆ ಹುಬ್ಬಳ್ಳಿಯಿಂದ ಈರುಳ್ಳಿ ತುಂಬಿಕೊಂಡು ಕೇರಳಕ್ಕೆ ಸಾಗಿಸುತ್ತಿದ್ದಾಗ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಗುಲ್ಬರ್ಗ ಚಿತ್ತಪುರದ ನೀಲಕಂಠ ಆಕಸ್ಮಿಕವಾಗಿ ಲಾರಿಯಿಂದ ಕೆಳಕ್ಕೆ ಬಿದ್ದು ಕಾಲಿಗೆ ಬಲವಾದ ಏಟಾಯಿತು.
ಇದನ್ನು ನೋಡಿದ ಲಾರಿ ಚಾಲಕ ಸ್ವಾಮಿ ಈತನನ್ನು ಗಮನಿಸಿಯೂ ಗಮನಿಸದಂತೆ ಲಾರಿ ಮುಂದೆ ಚಲಾಯಿಸಿದ.
ಕಾಲಿಗೆ ಪೆಟ್ಟಾಗಿ ಬಿದ್ದ ನೀಲಕಂಠ ಸ್ಥಳೀಯವಾಗಿ ಅದೇ ರಸ್ತೆಯಾಗಿ ಬರುತ್ತಿದ್ದ ವಾಹನಗಳಿಗೆ ಕೈ ಹಿಡಿದು ಮಡಿಕೇರಿ ಸೇರಿಕೊಂಡ. ಅಲ್ಲಿ ಸ್ಥಳೀಯರು ಸೇರಿ ಅತನಿಗೆ ಚಿಕಿತ್ಸೆ ನೀಡಿ ಬಿಟ್ಟು ಬಿಟ್ಟರು.
ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಹತ್ತಿಕೊಂಡ ನೀಲಕಂಠ ಗಾಂಧಿನಗರದಲ್ಲಿ ಲಾರಿ ಚಾಲಕ ಬಿಟ್ಟು ಹೋಗಿದ್ದಾನೆ. ಸ್ಥಳೀಯರಲ್ಲಿ ನಡೆದ ವಿಷಯವನ್ನು ತಿಳಿಸಿದ ನೀಲಕಂಠನಿಗೆ ಊಟ ಕೊಡಿಸಿ ಉಪಚರಿಸಿದರು.
ಗಾಂಧಿನಗರದ ಬಶೀರ್, ಜೀಪು ಚಾಲಕ ಗಿರೀಶ್, ನಾಗರಾಜ್, ನ.ಪಂ. ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ ಮೊದಲಾದ ಸ್ಥಳೀಯರು ಸೇರಿ ಹಣ ಸಂಗ್ರಹಿಸಿ ತನ್ನ ಊರಿಗೆ ಕಳುಹಿಸುವ ತೀರ್ಮಾನ ಮಾಡಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮರೆದರು.