ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ ಉದ್ಘಾಟನೆ
ಪುತ್ತೂರು: ನಾಟಕಗಳು ಶೈಕ್ಷಣಿಕವಾಗಿ ಹಾಗೂ ಮನೋರಂಜನಾತ್ಮಕವಾಗಿ ಪ್ರೇಕ್ಷಕರನ್ನು ತಲುಪುವ ಪ್ರಬಲ ಮಾಧ್ಯಮ ಎಂದು ಹಿರಿಯ ಪತ್ರಕರ್ತ ಪ್ರೊ.ವಿ.ಬಿ. ಅರ್ತಿಕಜೆ ಅಭಿಪ್ರಾಯಪಟ್ಟರು.
ಅವರು ಬುಧವಾರ ಪುತ್ತೂರಿನ ಪುರಭವನದಲ್ಲಿ ಆರಂಭಗೊಂಡ ನಿರತನಿರಂತ ಪುತ್ತೂರು ಹಾಗೂ ಬಹುವಚನಂ ಆಯೋಜನೆಯ ಹತ್ತನೇ ವರ್ಷದ ಪ್ರೇಮಾಕಾರಂತ ನೆನಪಿನ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಟ್ಟಾಮುಟ್ಟಾ ನಾಟಕೋತ್ಸವವನ್ನು ಪುತ್ತೂರು ಪೂರ್ವದ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಪುತ್ತೂರಾಯ ಉದ್ಘಾಟಿಸಿದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಹಿರಿಯ ರಂಗಕರ್ಮಿ ಕೆ.ಜಿ. ಕೃಷ್ಣಮೂರ್ತಿ ಮಾತನಾಡಿ, ಯಾವುದೇ ಸಂಸ್ಥೆಯ ನಿರಂತರ ಚಟುವಟಿಕೆಗಳು ಅವುಗಳ ಬದ್ಧತೆಯನ್ನು, ಜವಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು. ಬಹುವಚನಂನ ಡಾ. ಶ್ರೀಶ ಕುಮಾರ್ ವೇದಿಕೆಯಲ್ಲಿ ಇದ್ದರು.
ನಿರತನಿರಂತದ ಐಕೆಬೊಳುವಾರು ಸ್ವಾಗತಿಸಿ, ಪ್ರಸ್ತಾಪಿಸಿದರು. ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ವಂದಿಸಿದರು. ಪತ್ರಕರ್ತ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ರಾಮಕೃಷ್ಣ ಪ್ರೌಢಶಾಲಾ ಮಕ್ಕಳ ಸೇವ್ ವಾಟರ್ ಹಾಗೂ ಕಿನ್ನರ ಮೇಳ ತುಮರಿ ತಂಡದ ಸುಶೀಲಾ ಕೆಳಮನೆ ಅಭಿನಯದ 'ಗಿರಿಬಾಲೆ' ನಾಟಕ ಪ್ರದರ್ಶನಗೊಂಡಿತು.