ಅತಿಥಿ ಉಪನ್ಯಾಸಕರ ಮುಷ್ಕರ ತಾತ್ಕಾಲಿಕ ಹಿಂತೆಗೆತ
ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ದ.ಕ. ಮತ್ತು ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳಿಂದ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆ ಇರಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಅವರು ನೀಡಿದ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಈ ಸಂದರ್ಭ ಭರವಸೆ ನೀಡಿದ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಬಜೆಟ್‌ನಲ್ಲಿ ಹಣಕಾಸು ಕೊರತೆ ಇದ್ದುದರಿಂದ ವೇತನ ಬಿಡುಗಡೆ ಮಾಡಲು ಆಗಿಲ್ಲ, ಇದರಿಂದಾಗಿ 3 ತಿಂಗಳಿನಿಂದ ವೇತನ ಬಿಡುಗಡೆ ಆಗಿಲ್ಲ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಲ್ಲದೆ ಈ ವರ್ಷ ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದ್ದು ಮುಂದಿನ 20 ದಿನಗಳ ವರೆಗೆ ಕಾದು ನೋಡಲಾಗುತ್ತದೆ, ನಂತರವೂ ಬೇಡಿಕೆ ಈಡೇರಿಕೆ ಆಗದೇ ಇದ್ದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದರು
ಸಂಘದ ಮಂಗಳೂರು ನಗರ ಕಾರ್ಯದರ್ಶಿ ನಾಗರಾಜ್, ಗೌರವಾಧ್ಯಕ್ಷ ಗೋಪಾಲಕೃಷ್ಣ, ನಿರ್ದೇಶಕ ಪುರಂದರ, ಮಂಗಳೂರು ನಗರ ಕೋಶಾಧಿಕಾರಿ ಹರ್ಷಲತಾ ಇದ್ದರು.