ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿವಿಗೆ ಟಿಪ್ಪು ಹೆಸರಿಟ್ಟರೆ ಕ್ರೈಸ್ತರನ್ನು ಅಪಮಾನಿಸಿದಂತೆ: ಟಿ.ಜೆ. ಅಬ್ರಹಾಂ

Lingaraj Badiger
Updated On : 8 Feb 2013, 10:59 am

ಬೆಂಗಳೂರು: ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿಸಿರುವ ವಿಶ್ವವಿದ್ಯಾಲಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಮಂಗಳೂರು ಹಾಗೂ ಕಾರವಾರ ತೀರದ ಕ್ರೈಸ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಅವರು ಹೇಳಿದ್ದಾರೆ.
ಅಲ್ಲದೆ, ಶ್ರೀರಂಗಪಟ್ಟಣದ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿನ ಬದಲು ಕನ್ನಡ ನಿಘಂಟು ಜನಕ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಹೆಸರಿಡುವುದೇ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಟಿಪ್ಪೂ ಸುಲ್ತಾನ್ ತನ್ನ ಆಡಳಿತದಲ್ಲಿ ಕನ್ನಡಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿರಲಿಲ್ಲ. ಅಲ್ಲದೆ, ಆತ ತನ್ನ ಆಡಳಿತಾವಧಿಯಲ್ಲಿ ಮಂಗಳೂರು ಹಾಗೂ ಕಾರವಾರ ತೀರದ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಎಳೆತಂದು ಬಲವಂತವಾಗಿ ಮತಾಂತರಗೊಳಿಸಿದ್ದಾನೆ ಎಂದರು.
ಟಿಪ್ಪು ಮಗ ಗುಲಾಂ ಮಹಮ್ಮದ್ ತನ್ನ ಪುಸ್ತಕದಲ್ಲಿ ಈ ಸತ್ಯ ಬಹಿರಂಗಪಡಿಸಿದ್ದಾನೆ. ಹೀಗಿರುವಾಗ ಶ್ರೀರಂಗಪಟ್ಟಣದ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಮಂಗಳೂರು ಹಾಗೂ ಕಾರವಾರ ತೀರದ ಕ್ರೈಸ್ತರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕ್ರೈಸ್ತರು, ಸಿಖ್ಖರು, ಬೌದ್ಧರು ಮತ್ತು ಜೈನರು ಕೂಡ ಅಲ್ಪಸಂಖ್ಯಾತರೇ. ಹಾಗಿರುವಾಗ ಕೇಂದ್ರ ಸರ್ಕಾರ ಅಲ್ಪಸಂಖ್ಯಾತರಿಗೆಂದು ನಿರ್ಮಿಸಲಿರುವ ಶ್ರೀರಂಗಪಟ್ಟಣ ವಿವಿಗೆ ಟಿಪ್ಪು ಹೆಸರಿಡಲು ಮುಂದಾಗಿರುವುದರ ಹಿಂದೆ ದುರುದ್ದೇಶವಿದೆ ಎಂದು ಅವರು ಆರೋಪಿಸಿದರು.
ಕಿಟೆಲ್ ಹೆಸರು ಏಕೆ ಸೂಕ್ತ?: ಅಷ್ಟಕ್ಕೂ ಶ್ರೀರಂಗಪಟ್ಟಣದ ವಿವಿಗೆ ಟಿಪ್ಪೂ ಹೆಸರಿಡುವ ಮುನ್ನ ಅಲಿಘರ್, ಒಸ್ಮಾನಿಯ ಅಥವಾ ನಗರದ ಅಲ್ ಅಮೀನ್ ಕಾಲೇಜಿನಲ್ಲಿ ಮುಸ್ಲಿಮೇತರರು ಎಷ್ಟು ಜನರಿದ್ದಾರೆ? ಕ್ರೈಸ್ತರು, ಬೌದ್ಧರು, ಜೈನರು ಮತ್ತು ಹಿಂದುಗಳು ಅಂತಹ ಕಾಲೇಜು ಸೇರಲು ಏಕೆ ಹಿಂಜರಿಯುತ್ತಿದ್ದಾರೆ ಎಂಬುದನ್ನು ಪರಾಮರ್ಶಿಸಬೇಕು. ಆದರೆ ಕ್ರೈಸ್ತ ವಿದ್ಯಾಸಂಸ್ಥೆಗಳಲ್ಲಿ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಎಲ್ಲಾ ವರ್ಗದ ಅಧ್ಯಾಪಕರು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಇರುತ್ತಾರೆ. ಪ್ರತಿ ನಗರಕ್ಕೊಂದರಂತೆ ಇರುವ ಕ್ರೈಸ್ತ ವಿದ್ಯಾಸಂಸ್ಥೆಗಳಲ್ಲಿ ಶೇ. 85ರಷ್ಟು ಕ್ರೈಸ್ತೇತರರು ಇರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ಆಕರ್ಷಿಸದಂತಹ ಟಿಪ್ಪೂ ಸುಲ್ತಾನ್ ಹೆಸರಿಡುವ ಬದಲು ರೆ. ಫರ್ಡಿನಾಂಡ್ ಕಿಟೆಲ್ ಅವರ ಹೆಸರಿಡುವುದೇ ಸೂಕ್ತ ಎಂದು ಪ್ರತಿಪಾದಿಸಿದರು.
ಒಂದು ವಿವಿಗೆ ನಿರ್ದಿಷ್ಟ ವರ್ಗದ ಹೆಸರಿಡುವ ಮುನ್ನ ಆತ ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆ ಪರಿಗಣಿಸಬೇಕು. ಕರ್ನಾಟಕ, ಕನ್ನಡದ ಬಗ್ಗೆ ಅಪಾರ ಗೌರವವಿದ್ದ ಕಿಟೆಲ್ ಅವರು 1894ರಲ್ಲಿ 1758 ಪುಟಗಳ ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿ ದೇಶಾದ್ಯಂತ ಮನೆಮಾತಾಗಿದ್ದಾರೆ. ಹಾಗಾಗಿ ಅಲ್ಪಸಂಖ್ಯಾತರಿಗಾಗಿ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲ್ಪಡುವ ವಿವಿಗೆ ಕಿಟೆಲ್ ಅವರ ಹೆಸರನ್ನು ಇಡಬೇಕು ಎಂದು ಅಬ್ರಹಾಂ ಆಗ್ರಹಿಸಿದರು.
ಅಬ್ರಹಾಂ ಅವರ ಆಗ್ರಹಕ್ಕೆ ಅಖಿಲ ಕರ್ನಾಟಕ ಕನ್ನಡ ಕ್ರೈಸ್ತರ ಸಂಘ, ಕರ್ನಾಟಕ ಕೊಂಕಣಿ ಸಂಘಗಳ ಒಕ್ಕೂಟ, ಕೊಂಕಣಿ ಕೆಥೊಲಿಕ್ ಸಂಘ, ಕರ್ನಾಟಕ ದಲಿತ ಕ್ರೈಸ್ತರ ರಕ್ಷಣಾ ವೇದಿಕೆ, ಯುನೈಟೆಡ್ ಕ್ರಿಶ್ಚಿಯನ್ ಫ್ರಂಟ್, ಕರ್ನಾಟಕ ತಮಿಳರ ಮುನ್ನಡೆ ಕಳಗಂ(ಕ್ರೈಸ್ತರ ವಿಭಾಗ) ಮುಂತಾದ ಸಂಘಟನೆಗಳು ಬೆಂಬಲ ಸೂಚಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement