ನೈತಿಕತೆ, ಸ್ವೇಚ್ಛಾಚಾರ: ಸಾರಾ-ನಳಿನ್ ಭಿನ್ನ ನಿಲುವು
ಮಂಗಳೂರು: ಅಬ್ಬಕ್ಕ ಜನಿಸಿದ ಈ ಜಿಲ್ಲೆಯಲ್ಲಿ ಹೆಣ್ಮಕಳ ಮೇಲೆ ನೈತಿಕ ಪೊಲೀಸರು ಅಧಿಕಾರ ಚಲಾಯಿಸಲು ಬಂದರೆ ಜಾಗ್ರತೆ, ಇಲ್ಲಿಂದಲೇ ನೈತಿಕ ಪೊಲೀಸರ ವಿರುದ್ಧ ಹೋರಾಟ ಶುರುವಾಗಬೇಕು ಎಂದು ಹಿರಿಯ ಸಾಹಿತಿ, ನಾಡೋಜ ಡಾ.ಸಾರಾ ಅಬೂಬಕ್ಕರ್ ಕಿಡಿ ಕಾರಿದ್ದಾರೆ. ಇದಕ್ಕೆ ಉತ್ತರವಾಗಿ ಶಾಲೆಯ ಮಕ್ಕಳು ಡ್ರಗ್ಸ್, ಸ್ವೇಚ್ಛಾಚಾರಕ್ಕೆ ಬಲಿಯಾಗಬಾರದು. ಅಬ್ಬಕ್ಕ ಉತ್ಸವದಿಂದಲೇ ಇದರ ವಿರುದ್ಧ ಹೋರಾಟಕ್ಕೆ ಪ್ರೇರಣೆ ಸಿಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ.
ಇವರಿಬ್ಬರ ಭಾಷಣ ಸಮರಕ್ಕೆ ವೇದಿಕೆಯಾದ್ದು ಕನ್ನಡ ಸಂಸ್ಕೃತಿ ಇಲಾಖಾ ಸಹಕಾರದಲ್ಲಿ ಉಳ್ಳಾಲ ಭಾರತ್ ಪ್ರೌಢ ಶಾಲೆಯಲ್ಲಿ ಶನಿವಾರ ಪ್ರಾರಂಭವಾದ 2 ದಿನಗಳ ವೀರರಾಣಿ ಅಬ್ಬಕ್ಕ ದಶಮಾನೋತ್ಸವ.
ಸಾ.ರಾ. ಹೇಳಿದ್ದೇನು?: ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಡಾ.ಸಾರಾ ಅಬೂಬಕ್ಕರ್, ಅಬ್ಬಕ್ಕನ ನಾಡಿನಲ್ಲಿರುವ ಮಹಿಳೆಯರು ಯಾರೂ ಹೆಣ್ಮಕ್ಕಳ ಮೇಲಿನ ದೌರ್ಜನ್ಯವನ್ನು ಧೈರ್ಯದಿಂದ ಪ್ರತಿಭಟಿಸುತ್ತಿಲ್ಲ. ಜಿಲ್ಲೆಯಲ್ಲಿ ಮತ್ತೆ ತಾಲಿಬಾನ್ ಮಾದರಿಯ ನೈತಿಕ ಪೊಲೀಸ್ಗಿರಿ ನಡೆಯುತ್ತಿದೆ. ನಮ್ಮ ಹೆಣ್ಮಕ್ಕಳಿಗೆ ಸಂಸ್ಕೃತಿ ಕಲಿಸಲು ಮಹಿಳೆಯರಿಗೆ ಗೊತ್ತು, ಅದನ್ನು ನೈತಿಕ ಪೊಲೀಸರು ಹೇಳಿಕೊಡಬೇಕಾಗಿಲ್ಲ ಎಂದು ಖಾರವಾಗಿ ನುಡಿದರು. ಅಲ್ಲದೆ ಟಿಪ್ಪು ವಿವಿ ರಾಜ್ಯದಲ್ಲಿ ಸ್ಥಾಪನೆಯಾಗಬೇಕು. ಅಬ್ಬಕ್ಕನಂತೆ ಟಿಪ್ಪುವಿಗೂ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು.
ನಳಿನ್ ಪ್ರತ್ಯುತ್ತರ: ನಂತರ ಅಧ್ಯಕ್ಷ ಭಾಷಣದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಅಬ್ಬಕ್ಕ ರಾಷ್ಟ್ರದ ಸ್ವತ್ತು. ಇದು ಕೇವಲ ಸರ್ಕಾರಿ ಉತ್ಸವ ಆಗಬಾರದು. ಆಕೆ ಸ್ವೇಚ್ಛಾಚಾರಕ್ಕಾಗಿ ಸ್ವಾತಂತ್ರ್ಯಕ್ಕೆ ಹೋರಾಡಿಲ್ಲ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಡ್ರಗ್ಸ್, ಸ್ವೇಚ್ಛಾಚಾರಕ್ಕೆ ಬಲಿಯಾಗಬಾರದು ಎಂದರು.
ಅಬ್ಬಕ್ಕನ ನಡೆನುಡಿಗಳು ಶಾಲಾ ಪಠ್ಯದಲ್ಲಿ ದಾಖಲಾಗಬೇಕು. ಅಬ್ಬಕ್ಕ ಪೀಠ ಸ್ಥಾಪನೆಯಾಗಬೇಕು. ಅಬ್ಬಕ್ಕ ಭವನಕ್ಕೆ ರಾಜ್ಯ ಸರ್ಕಾರ 2 ಕೋಟಿ ನೀಡಿದ್ದು, ಈ ಬಾರಿ ದಶಮಾನೋತ್ಸವಕ್ಕೆ ರು. 30 ಲಕ್ಷ ಬಿಡುಗಡೆ ಮಾಡಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀನಿವಾಸ ಮಲ್ಯರ ಹೆಸರು, ಬಂದರಿಗೆ ಅಬ್ಬಕ್ಕ ಹೆಸರು ಇಡುವ ವಿಚಾರ ಪ್ರಸ್ತಾಪದಲ್ಲಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿದೆ ಎಂದರು.
ಮಂಗಳೂರು ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು.
ಸಾಕ್ಷ್ಯಚಿತ್ರ ಬಿಡುಗಡೆ: ರಾಣಿ ಅಬ್ಬಕ್ಕ ಸಾಕ್ಷ್ಯಚಿತ್ರವನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಬಿಡುಗಡೆಗೊಳಿಸಿದರು. ವಿವಿಧ ಗೋಷ್ಠಿಗಳನ್ನು ರಾಜ್ಯ ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್ ಉದ್ಘಾಟಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪಡುಪೆರಾರಿನ ಜಾನಪದ ಕಲಾವಿದೆ ಭವಾನಿ ಉದ್ಘಾಟಿಸಿದರು.
ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್, ಉಳ್ಳಾಲ ಪುರಸಭೆ ಉಪಾಧ್ಯಕ್ಷೆ ಭವಾನಿ, ಎಪಿಎಂಸಿ ಸದಸ್ಯ ಗಂಗಾಧರ್, ಕೋಟೆಕಾರು ಸಿಎ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಸಮ್ಮರ್ಸ್ಯಾಂಡ್ಸ್ ಅಧ್ಯಕ್ಷ ಲೋಯ್ ಅಲ್ಬುಕರ್ಕ್, ಉತ್ಸವ ಸಮಿತಿ ಗೌರವ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಕೆಎಸ್ಆರ್ಪಿ ಕಮಾಂಡೆಂಟ್ ರಾಮದಾಸ ಗೌಡ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಜಯಶೇಖರ್, ಸ್ವಗತಾಧ್ಯಕ್ಷ ಜಯರಾಮ ಶೆಟ್ಟಿ, ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್ ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.