ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂಗರಗುಡ್ಡೆಯಲ್ಲಿ ಗುಂಪು ಘರ್ಷಣೆ: ಲಾಠಿಚಾರ್ಜ್

Lingaraj Badiger
Updated On : 11 Feb 2013, 11:38 am

ಮೂಲ್ಕಿ:  ಕಿಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಅಂಗರಗುಡ್ಡೆಯಲ್ಲಿ ಭಾನುವಾರ ರಾತ್ರಿ ಎರಡು ತಂಡಗಳ ನಡುವೆ ಗುಂಪು ಘರ್ಷಣೆ ನಡೆದಿದ್ದು, ಪೊಲೀಸರು ಸಕಾಲದಲ್ಲಿ ಆಗಮಿಸಿ ಲಾಠಿ ಚಾರ್ಜ್ ನಡೆಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಘಟನೆ ವಿವರ: ಅಂಗರಗುಡ್ಡೆ ಮಸೀದಿ ಉರೂಸ್ ಸಮಾರಂಭ ಫೆ.7ರಿಂದ 9ರ ತನಕ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷೆ ಅಂಗರಗುಡ್ಡೆಯಿಂದ ಶಿಮಂತೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಅನುಮತಿ ನೀಡಿದ್ದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಜಿ.ಪಂ. ಸದಸ್ಯ ಹಾಗೂ ಸ್ಥಳೀಯರು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಅಧ್ಯಕ್ಷೆ ಮುಖ್ಯ ರಸ್ತೆ ಬಿಟ್ಟು ವೇದಿಕೆ ನಿರ್ಮಿಸಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಎರಡು ಗುಂಪುಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿತ್ತು.
ಭಾನುವಾರ ಮೂಲ್ಕಿಯ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ಗುತ್ತಕಾಡಿನ ಕ್ರಿಕೆಟ್ ತಂಡವು ರಾತ್ರಿ ಹೊತ್ತಿನಲ್ಲಿ  ಅಂಗರಗುಡ್ಡೆಗೆ ಬಂದು ವಿಜಯೋತ್ಸವ ಆಚರಿಸುತ್ತಿದ್ದರು. ವಿಜಯೋತ್ಸವ ಬಳಿಕ ತಂಡ ಮರಳಿ ಬರುವಾಗ ಸ್ಥಳೀಯ ಸಂಘಟನೆಯ ಸದಸ್ಯರು ಕಲ್ಲು ಅಡ್ಡ ಇಟ್ಟು ವಿಜಯೋತ್ಸವಕ್ಕೆ ತಂಡಕ್ಕೆ ಅಡ್ಡಿಯೊಡ್ಡಿದರು.
ಲಾಠಿಚಾರ್ಜ್: ವಿಷಯ ತಿಳಿದ ಮೂಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದರು.
ಪತ್ರಿಕಾ ಸಿಬ್ಬಂದಿಗೆ ಹಲ್ಲೆ: ಇದಕ್ಕೂ ಮೊದಲು, ಮಂಗಳೂರಿನ ಸಂಜೆ ಪತ್ರಿಕೆಯೊಂದರ ಸಿಬ್ಬಂದಿ ಮೂಲ್ಕಿ ಸಮೀಪದ ಕೊಲಕಾಡಿಯ ರೇಲ್ವೆ ಗೇಟ್ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ನಾಲ್ಕು ಮಂದಿ ಅಪರಿಚಿತರು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಪುನೀತ್ ಕೃಷ್ಣನನ್ನು ಮೂಲ್ಕಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ಪತ್ರಿಕಾ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಬಳಿಕ ತಂಡಗಳ ನಡುವೆ ಅಸಮಾಧಾನ ಕುದಿಯುತ್ತಿದ್ದು, ಕ್ರಿಕೆಟ್ ವಿಜಯೋತ್ಸವ ವೇಳೆ ಸ್ಫೋಟಿಸಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement