ಟರ್ಬೈನರ್ ಸ್ಥಗಿತ: ತಾತ್ಕಾಲಿಕ ಕಟ್ಟ ನಿರ್ಮಾಣಕ್ಕೆ ಸೂಚನೆ
ಮಂಗಳೂರು: ಬೆಳ್ತಂಗಡಿಯ ಇಂದಬೆಟ್ಟು ಗ್ರಾಮ ಪಂಚಾಯ್ತಿಯ ಕುದ್ಕೊಳಿಯಲ್ಲಿ ಸ್ಥಗಿತಗೊಂಡ ಟರ್ಬೈನರ್ನ್ನು ಮತ್ತೆ ಚಾಲೂಗೊಳಿಸುವ ನಿಟ್ಟಿನಲ್ಲಿ ಹೊಳೆಗೆ ತಾತ್ಕಾಲಿಕ ಕಟ್ಟ ನಿರ್ಮಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್ ಜಲಾನಯ ಇಲಾಖೆಗೆ ಸೂಚಿಸಿದ್ದಾರೆ. ಜಿಲ್ಲಾಡಳಿತ ಕಳೆದ ವರ್ಷ ಇಲ್ಲಿ 5 ಮಂದಿ ಮಲೆಕುಡಿಯರ ಮನೆಗಳಿಗೆ ನಕ್ಸಲ್ ಪ್ಯಾಕೇಜ್ನಲ್ಲಿ ಜಲವಿದ್ಯುತ್ ಯೋಜನೆಯನ್ನು ಕಾರ್ಯಗತಗೊಳಿಸಿತ್ತು. ಆದರೆ ಹರಿಯುವ ನೀರು ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಇಲ್ಲದ ಪರಿಣಾಮ ಜನವರಿಯಲ್ಲೇ ನೀರಿನ ಕೊರತೆ ತಲೆದೋರಿ ಟರ್ಬೈನರ್ ಸ್ಥಗಿತಗೊಂಡಿತ್ತು. ಈ ಬಗ್ಗೆ ಫೆ.8ರಂದು 'ಕನ್ನಡಪ್ರಭ' ವಿಶೇಷ ವರದಿಯನ್ನು ಪ್ರಕಟಿಸಿತ್ತು. ಈ ವರ್ಷದ ಮಟ್ಟಿಗೆ ಮಣ್ಣಿನ ಕಟ್ಟವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ. ಮುಂದಿನ ವರ್ಷ ಕಿಂಡಿ ಅಣೆಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ತಕ್ಷಣದಲ್ಲಿ ಕಟ್ಟ ನಿರ್ಮಿಸಲು ತ್ವರಿತ ಕ್ರಮಕೈಗೊಳ್ಳುವಂತೆ ಜಲಾನಯನ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿಇಒ ಡಾ.ವಿಜಯ ಪ್ರಕಾಶ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಒಂಬುಡ್ಸ್ಮನ್ ಸ್ಪಂದನ: ನೀರು ಸಂಗ್ರಹಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಮಣ್ಣಿನಿಂದ ಕಟ್ಟ ನಿರ್ಮಿಸುವಂತೆ ಒಂಬುಡ್ಸ್ಮನ್ ಶೀನ ಶೆಟ್ಟಿ ಸಲಹೆ ಮಾಡಿದ್ದಾರೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕಟ್ಟ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.