ನಾಳೆಯಿಂದ ಅಡಪಾಡಿ ಬ್ರಹ್ಮಕುಂಭಾಭಿಷೇಕ
ಕಾರ್ಕಳ: ಪಳ್ಳಿ ಗ್ರಾಮದ ಕಾರಣಿಕ ಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಫೆ. 12ರಿಂದ 16ರವರೆಗೆ ಜರುಗುವ ಉಭಯ ದೇವರ ಬ್ರಹ್ಮಕುಂಭಾಭಿಷೇಕಕ್ಕೆ ಪೂರ್ವಭಾವಿಯಾಗಿ ನೂತನ ರಾಜಗೋಪುರ ಉದ್ಘಾಟನೆ, ಶ್ರೀಕ್ಷೇತ್ರದ ಕಾರಣಿಕ ದೈವ ಶ್ರೀಕಲ್ಕುಡ, ಕರ್ಲ್ಲುಟ್ಟಿಯ ಶಿಲಾಮಯ ನೂತನ ಗುಡಿ, ದೈವಗಳ ಪುನರ್ ಪ್ರತಿಷ್ಠೆ, ತಗಡು ಚಪ್ಪರ, ನೂತನ ರಾಜಾಂಗಣ, ಶ್ರೀ ಉಮಾಮಹೇಶ್ವರ ದೇವಳದ ಸುತ್ತು ಪೌಳಿ, ಅಣ್ಣಪ್ಪ ಸ್ವಾಮಿ ಪುನರ್ ಪ್ರತಿಷ್ಠೆ, ಶತ ಚಂಡೀಯಾಗ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಲಿದ್ದಾರೆ. ಪುಂಡಲೀಕ ನಾಯಕ್, ಉಪೇಂದ್ರ ನಾಯಕ್, ಎಂ. ಗೋಕುಲದಾಸ್ ನಾಯಕ್, ರಮಾನಂದ ನಾಯಕ್, ಹರಿಶ್ಚಂದ್ರ ತೆಂಡುಲ್ಕರ್, ಕಡಾರಿ ರವೀಂದ್ರ ಪ್ರಭು ಮುಂತಾದವರು ಕಾಮಗಾರಿಗಳನ್ನು ವೀಕ್ಷಿಸಿದರು. ಶ್ರೀಶ ನಾಯಕ್, ಗುತ್ತಿಗೆದಾರ ಮಂಜುನಾಥ ನಾಯಕ್ ಚಿಟ್ಪಾಡಿ, ಜಯರಾಮ ಪ್ರಭು ಗಂಪದಬೈಲು, ಬಾಲಚಂದ್ರ ನಾಯಕ್, ದೇವೇಂದ್ರ ನಾಯಕ್, ಮೇಲ್ವಿಚಾರಕ ರವಿಚಂದ್ರ ಉಪಸ್ಥಿತರಿದ್ದರು.
ರಕ್ತದಾನ ಶಿಬಿರ
ಉಡುಪಿ: ಇಲ್ಲಿನ ಫ್ರೆಂಡ್ಸ್ ಕ್ಲಬ್, ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಉಪೇಂದ್ರ ಪೈ ಸ್ಮಾರಕ ಕಾಲೇಜಿನಲ್ಲಿ ಶನಿವಾರ ನಡೆದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಸಂತ ರಾವ್ ಕರಂಬಳ್ಳಿ ಉದ್ಘಾಟಿಸಿದರು. ಡಾ. ಸುಧಾರಾವ್ ರಕ್ತದಾನದ ಮಹತ್ವವನ್ನು ವಿವರಿಸಿದರು. ಪ್ರಾಂಶುಪಾಲ ಡಾ. ಮಧುಸೂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿನಿ ವರ್ಣಿಕಾ ನಿರೂಪಿಸಿ, ಹರೀಶ್ ಕೌಡುರು ವಂದಿಸಿದರು.