ಬಟ್ಟೆಚೀಲ ತಯಾರಿ ವೃತ್ತಿಗಿಳಿದ ನವಸಾಕ್ಷರರು
- ಆತ್ಮಭೂಷಣ್
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿ ಆಗುತ್ತೋ ಇಲ್ಲವೋ, ಆದರೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆಚೀಲವನ್ನು ಎಲ್ಲ ಗ್ರಾಮಗಳಲ್ಲಿ ಉತ್ಪಾದಿಸುವ ಚಿಂತನೆ ಕಾರ್ಯರೂಪಕ್ಕೆ ಬರುತ್ತಿದೆ.
ಜಿಲ್ಲೆಯ ನವಸಾಕ್ಷರರು ಬಟ್ಟೆಚೀಲ ಹೊಲಿದು ಸಿದ್ಧಪಡಿಸುವ ಕಾಯಕಕ್ಕೆ ಇಳಿದಿದ್ದಾರೆ. ಇದನ್ನು ಆಂದೋಲನ ರೂಪದಲ್ಲಿ ಜಿಲ್ಲೆಯಾದ್ಯಂತ ವ್ಯಾಪಕಗೊಳಿಸಲು ಹೊರಟಿದ್ದಾರೆ. ಈ ಅಭಿಯಾನದ ಯಶಸ್ವಿಯಾದರೆ ಗೂಡಂಗಡಿ, ಸಂಘಸಂಸ್ಥೆ, ಮಾಲ್‌ಗಳಲ್ಲಿ ಬಟ್ಟೆಚೀಲ ಸುಲಭವಾಗಿ ಗ್ರಾಹಕರ ಕೈಸೇರಲಿದೆ.
ಜಿ.ಪಂ. ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಮಾದರಿ ಗ್ರಾಮ ವಿಕಾಸ ಕೇಂದ್ರ ನವಸಾಕ್ಷರರರಿಗೆ ತರಬೇತಿ ನೀಡುತ್ತಿದೆ. ಸದ್ಯಕ್ಕೆ ಪುತ್ತೂರಲ್ಲಿ 10, ಬೆಳ್ತಂಗಡಿ 9, ಮಂಗಳೂರು 9, ಬಂಟ್ವಾಳ 10 ಹಾಗೂ ಸುಳ್ಯದಲ್ಲಿ 8 ಕೇಂದ್ರಗಳಲ್ಲಿ ತರಬೇತಿ ನಡೆಯುತ್ತಿದೆ. ಇದಕ್ಕಾಗಿ ನವಸಾಕ್ಷರರ ಸಂಘಟನೆಗಳು ನಡೆಸುವ ಗ್ರಾಮ ವಿಕಾಸ ಕೇಂದ್ರಗಳಲ್ಲಿ ನವಸಾಕ್ಷರರ ವೃತ್ತಿ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ.
ಎಲ್ಲ ಗ್ರಾ.ಪಂ.ಗೆ ವಿಸ್ತರಣೆ: ಸಂಪೂರ್ಣ ಸಾಕ್ಷರ ಜಿಲ್ಲೆ ಎಂದು ದಕ್ಷಿಣ ಕನ್ನಡ 1991ರಲ್ಲಿ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ನವಸಾಕ್ಷರರ ಸಂಖ್ಯೆ 2.64 ಲಕ್ಷ ಆಗಿತ್ತು. ನಂತರ ಮುಂದುವರಿಕಾ ಶಿಕ್ಷಣ, ಕನ್ನಡ ನಾಡು ಸಾಕ್ಷರ ನಾಡು ಮುಂತಾದ ಕಾರ್ಯಕ್ರಮ ಮುಖೇನ ಸಾಕ್ಷರತೆಯಲ್ಲಿ ಸಕ್ರಿಯರಾಗಿ ಉಳಿದವರು 45 ಸಾವಿರ. ಪ್ರಸ್ತುತ ಬಟ್ಟೆಚೀಲ ತರಬೇತಿಯನ್ನು ಹಂತ ಹಂತವಾಗಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ.
ನವಸಾಕ್ಷರರಿಗೆ ಸ್ವಉದ್ಯೋಗದ ತರಬೇತಿ ನೀಡುತ್ತಿರುವುದು ಇದು ಹೊಸದಲ್ಲ. ಆದರೆ ಪ್ಲಾಸ್ಟಿಕ್ ನಿಷೇಧ ಕೂಗು ಜಿಲ್ಲೆಯಲ್ಲಿ ಕೇಳಿಬಂದ ಹಿನ್ನಲೆಯಲ್ಲಿ ಸಾಮೂಹಿಕವಾಗಿ ಬಟ್ಟೆಚೀಲ ತಯಾರಿಗೆ ಒತ್ತು ನೀಡುತ್ತಿರುವುದು ಇದೇ ಪ್ರಥಮ.
ಮಾ.5ಕ್ಕೆ ಮುಕ್ತಾಯ: ಫೆಬ್ರವರಿಯಲ್ಲಿ ತರಬೇತಿ ಶುರುವಾಗಿದ್ದು, ಮಾರ್ಚ್ 5ರಂದು ಮುಕ್ತಾಯವಾಗಲಿದೆ. 60 ದಿನಗಳ ತರಬೇತಿಯಲ್ಲಿ ಜನಶಿಕ್ಷಣ ಟ್ರಸ್ಟ್ ಬಟ್ಟೆ ತರಿಸಿಕೊಡುತ್ತಿದೆ. ಈ ಕೇಂದ್ರಗಳಲ್ಲಿ ಒಟ್ಟು 653 ಮಂದಿ ಹೊಲಿಗೆ ತರಬೇತಿ ಪಡೆಯುತ್ತಿದ್ದಾರೆ.
ಪ್ರತಿ ಕೇಂದ್ರಕ್ಕೆ ಒಂದು ಹೊಲಿಗೆ ಯಂತ್ರವಿದ್ದು, ಇಲ್ಲಿ ವೈಯಕ್ತಿಕ ಅಥವಾ ಗುಂಪಿನಲ್ಲಿ ಬಟ್ಟೆಚೀಲ ಉತ್ಪಾದಿಸಲು ಅವಕಾಶವಿದೆ ಎನ್ನುತ್ತಾರೆ ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ.
ಬಟ್ಟೆಚೀಲ ಘಟಕಕ್ಕೆ ಪ್ರಯತ್ನ: ಆಯ್ದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಟ್ಟೆಚೀಲ ಘಟಕ ತೆರೆಯುವ ಉದ್ದೇಶ ಹೊಂದಲಾಗಿದೆ. ಕನಿಷ್ಠ ವೆಚ್ಚದಲ್ಲಿ ಸುಲಭ ದರದಲ್ಲಿ ನಾನಾ ವಿಧದ ಬಟ್ಟೆಚೀಲಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒದಗಿಸುವ ಇರಾದೆ ಗ್ರಾಮ ವಿಕಾಸ ಕೇಂದ್ರದ್ದು. ಗ್ರಾಮ ಸಭೆ, ಗ್ರಾಮ ಪಂಚಾಯ್ತಿ ಸಭೆಗಳಲ್ಲಿ ಪ್ರಚಾರ ನಡೆಸಿ, ಪ್ಲಾಸ್ಟಿಕ್ ಬದಲು ಬಟ್ಟೆಚೀಲ ಉಪಯೋಗಿಸುವಂತೆ ಅರಿವು ಮೂಡಿಸುವ ಕಾರ್ಯ ಕೈಗೆತ್ತಿಕೊಳ್ಳಲು ಉದ್ದೇಶಿದೆ.