ಮಲ್ಪೆ ಕಡಲ ತಡಿಯಲ್ಲಿ ಶ್ರೀನಿವಾಸ ಕಲ್ಯಾಣ ಸಂಪನ್ನ
ಮಲ್ಪೆ: ಬೆಟ್ಟದೂರು ತಿರುಪತಿಯಿಂದ ಬಂದ ಶ್ರೀನಿವಾಸ ಕಡಲೂರು ಮಲ್ಪೆಯಲ್ಲಿ ಭಾನುವಾರ ಸಮುದ್ರರಾಜನ ಮಗಳು ಪದ್ಮಾವತಿಯನ್ನು ವಿವಾಹವಾದ... ಇದಕ್ಕೆ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಗಳಾದರು...
ಭಾನುವಾರ ಇಳಿಹೊತ್ತು, ಅತ್ತ ಸೂರ್ಯ ಸಮುದ್ರದಲ್ಲಿ ಮುಳುತ್ತಿದ್ದಂತೆ ಇತ್ತ ಮಲ್ಪೆ ತೀರದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ನಡೆಸಲಾಯಿತು. ಉಡುಪಿ ಕರಂಬಳ್ಳಿಯ ಶ್ರೀವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರ ಮಂದಿ ಭಾಗವಹಿಸಿದ್ದರು.
ಇಂದು ನೇಮೋತ್ಸವ
ಮೂಲ್ಕಿ: ಪಂಜ ಕೊಯಿಕುಡೆ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಫೆಬ್ರವರಿ 11 ರಂದು ರಾತ್ರಿ ಜರಗಲಿದೆ. ಸಂಜೆ ಜರಗಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥರು ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬ್ರಹ್ಮಬೈದರ್ಕಳ ನೇಮೋತ್ಸವ
ಬಂಟ್ವಾಳ: ಕೊರಂಟಬೆಟ್ಟು ಗುತ್ತು ಶ್ರೀವಿಷ್ಣುಮೂರ್ತಿ, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಜಾತ್ರೆ ಆರಂಭವಾಗಿದ್ದು ಫೆ.13ರತನಕ ನಡೆಯಲಿದೆ.